ಅಫಜಲಪುರ ಗುಲ್ಬರ್ಗಾ- ನಮ್ಮ ಭಾರತ ದೇಶಕ್ಕೆ ಪುರಾತನ ವೇದಗಳ ಪರಂಪರೆಯಿದೆ. ಈ ದೇಶ ವೇದ ಉಪನಿಷತ್ತುಗಳಿಂದ ಸಮೃದ್ಧವಾಗಿದೆ. ಋಗ್ವೇದದಲ್ಲಿ ಜೀವನದ ಎಲ್ಲ ಮೌಲ್ಯಗಳ ಕುರಿತು ಮಾಹಿತಿ ಇದೆ. ಅವುಗಳ ಅಧ್ಯಯನದ ಸಾರ ನಮ್ಮ ಶಿಕ್ಷಣ ಕ್ರಮದಲ್ಲಿ ಅಳವಡಿಸಿಕೊಳ್ಳುವಂತಹ ಸಿಲೇಬಸ್ ರೂಪಿಸಲು ಸರಕಾರ ಮುಂದಾಗಬೇಕು.
ಆಧುನಿಕ ಶಿಕ್ಷಣ ಪದ್ಧತಿಯಿಂದ ನೈತಿಕ ಅಧಃಪತನ ಹೊಂದುತ್ತಿರುವ ಇಂದಿನ ಸಂದರ್ಭದಲ್ಲಿ ಗುರುಕುಲ ಮಾದರಿಯ ಶಿಕ್ಷಣದ ಮೂಲಕ ಆಧುನಿಕ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಬಿತ್ತುತ್ತಿರುವ ಗುರುಕುಲ ವಿದ್ಯಾಪೀಠ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಉತ್ತರ ಕನ್ನಡ ಜಿಲ್ಲೆಯ ಭಾವಕವಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ನುಡಿದರು.
ಅವರು ಇಂದು ಮಂಗಳವಾರ ಗುಲ್ಬರ್ಗಾ ಜಿಲ್ಲೆಯ ಅಫಜಲಪುರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಗುರುಕುಲ ವಿದ್ಯಾಪೀಠ ಇದರ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಹಾಜರಿದ್ದು ಮಾತನಾಡಿದರು.
ನೈತಿಕ ಮೌಲ್ಯಗಳನ್ನೊಳಗೊಂಡ ಶಿಕ್ಷಣ ನೀಡುವುದು ಶಿಕ್ಷಣದ ಮುಖ್ಯ ಗುರಿಯಾಗಬೇಕು.ಸನಾತನ ಸಂಸ್ಕೃತಿಯ ನೆಲಗಟ್ಟಿನ ಮೇಲೆ ಗಟ್ಟಿಯಾಗಿ ನಿಂತಿರುವ ಈ ಗುರುಕುಲ ತನ್ನ ಹೆಸರಿಗೆ ತಕ್ಕಂತೆ ಆಧುನಿಕ ಭರಾಟೆಯಲ್ಲಿಯೂ ಗುರುಕುಲ ಮಾದರಿ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇಲ್ಲಿಯ ಶಿಕ್ಷಕರೂ ವಿದ್ಯಾರ್ಥಿಗಳಲ್ಲಿ ನೃತಿಕತೆ ಬಿತ್ತಲು ಸಮರ್ಥರಿದ್ದಾರೆ ಎಂಬುದನ್ನು ಇಲ್ಲಿಯ ಮುದ್ದು ಮಕ್ಕಳ ಕಣ್ಣಿನ ಬೆಳಕಿನಲ್ಲೇ ಗುರುತಿಸಬಹುದಾಗಿದೆ ಎಂದರು.
ಗುರುಕುಲ ಮಾದರಿಯ ವಿದ್ಯಾಮಂದಿರ ಕೇವಲ ಕಲಬುರ್ಗಿ ಮಾತ್ರವಲ್ಲ, ದೇಶದ ತುಂಬ ಹರಡಿಕೊಳ್ಳುವಂತಾಗಬೇಕು. ಆಗ ಹೊಸಬೆಳಕನ್ನು ಕಾಣಲು ಸಾಧ್ಯ.
ಇಂದು ನಾವು ರಾತ್ರಿ ಬೆಳಗಾಗುವ ಒಳಗೆ ಅಭಿನಂದನ್ ಎಂಬ ವೀರ ಸೇನಾನಿಯನ್ನು ಕಂಡ ಸಂಭ್ರಮದಲ್ಲಿದ್ದೇವೆ. ಆದರೆ ನಮ್ಮ ದೇಶದಲ್ಲಿ ಇಂಥ ಸಾವಿರಾರು ಅಭಿನಂದನ್ ರಂತವರು ಕೇವಲ ಸೈನ್ಯ ಮಾತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲೂ ತೆರೆ ಮರೆಯಲ್ಲಿದ್ದಾರೆ. ಅವರೆಲ್ಲರೂ ಮುಂಚೂಣಿಗೆ ಬಂದು ನಮ್ಮ ಮಕ್ಕಳಿಗೆ ಆದರ್ಶವಾಗಬೇಕು. ಎಂದು ಉಮೇಶ ಮುಂಡಳ್ಳಿ ನುಡಿದರು.
ಅಚ್ಛೇ ದಿನ್ ಚಳುವಳಿ ಕೇವಲ ಒಬ್ಬರಿಂದ ಸಾಧ್ಯವಿಲ್ಲ, ಎಲ್ಲರಿಂದ ಆರಾಂಭವಾದಾಗ ದೇಶ ಪ್ರಕಾಶಮಾನವಾಗುತ್ತದೆ ಎಂದು ಪ್ರದಾನಿ ನರೇಂದ್ರ ಮೋದಿಯವರು ಹೇಳಿರುವ ಮಾತಿನ ಹಿಂದಿನ ಗಂಭೀರತೆಯನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ಆ ಮೂಲಕ ಮಕ್ಕಳಿಗೆ ಅರ್ಥ ಮಾಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಹಾಜರಿದ್ದ ಕ್ಯಾಮ್ಸ್ ಜಿಲ್ಲಾ ಕಾರ್ಯದರ್ಶಿ ಸುನಿಲ್ ಹುಡುಗಿ ಮಾತನಾಡಿ ಮಕ್ಕಳ ಮೇಲಿನ ಜವಬ್ದಾರಿ ಶಾಲೆಗಿಂತ ಅವರ ಪೋಷಕರ ಮೇಲೆಯೆ ಹೆಚ್ಚಾಗಿರುತ್ತದೆ.ಪಾಲಕರು ಮಕ್ಕಳ ಚಲನ ವಲನಗಳ ಕುರಿತು ಅತ್ಯಂತ ಕಾಳಜಿ ವಹಿಸುವ ಅನಿವಾರ್ಯತೆ ಇಂದು ಹೆಚ್ಚಾಗಿದೆ ಎಂದು ಅಭಿಪ್ರಾಯ ಪಟ್ಟರು. ಮೊಬೈಲ್ ಬಳಕೆಯಿಂದ ಮಕ್ಕಳು ದಾರಿ ತಪ್ಪದಂತೆ ಅದರ ಉಪಯುಕ್ತತೆಯ ಬಗ್ಗೆ ಮಾತ್ರ ಅವರಿಗೆ ತಿಳಿಸಿಕೊಡಬೇಕು. ಸಂಸ್ಕಾರವಂತ ಮಕ್ಕಳ ನಿರ್ಮಾಣ ಶಾಲೆ ಮತ್ತು ಪಾಲಕರಿಂದ ಮಾತ್ರ ಸಾಧ್ಯ ಎಂದರು. ಗುರುಕುಲ ವಿದ್ಯಾಪೀಠದ ಅಧ್ಯಕ್ಷ ಅಪ್ಪಾರಾವ್ ಹೆಗ್ಗಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗುಲ್ಬರ್ಗಾ ಆಕಾಶವಾಣಿಯ ಲಕ್ಷ್ಮೀಕಾಂತ ಪಾಟಿಲ್, ಚಂದು ದೇಸಾಯಿ, ಮತೀನ ಪಟೆಲ್, ಸುನಿಲ್ ಮಾಲ್ಪಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮ ವನ್ನು ಶಿಕ್ಷಕಿ ಕೋಮಲ ನಿರ್ವಹಿಸಿದರು. ಈ ಸಂದರ್ಭದಲ್ಲಿ ಗಣ್ಯರನ್ನು ಹಾಗೂ ವಿಶೇಷವಾಗಿ ಸಾಧನೆಗೈದ ಮಕ್ಕಳನ್ನು ಪುರಸ್ಕರಿಸಲಾಯಿತು.