ಕುಮಟಾ: ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಹೊಲನಗದ್ದೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾಂಸ್ಕøತಿಕ ಹಾಗೂ ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಇಲ್ಲಿನ ಕಡಲ ತೀರದ ಯುವಕ ಮಿತ್ರ ಮಂಡಳಿಯವರು ಏರ್ಪಡಿಸಿದ 26ನೇ ವರ್ಷದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಕೆ. ಶೆಟ್ಟಿಯವರು ನಾಡಿನ ಏಳ್ಗೆಗಾಗಿ ಯುವ ಸಂಘಟನೆಯ ಪಾತ್ರ ಮಹತ್ವದ್ದು, ಕಡಲ ತೀರದ ಯುವಕ ಮಿತ್ರ ಮಂಡಳಿಯವರು ಮೀನುಗಾರಿಕೆಯಂತಹ ಹೋರಾಟದ ಬದುಕಿನ ನಡುವೆಯೂ ಶಿವರಾತ್ರಿ ಸಂದರ್ಭದಲ್ಲಿ ಬಿಡುವು ಮಾಡಿಕೊಂಡು ಶಿವಾರಾಧನೆಯೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಉ.ಕ. ಜಿಲ್ಲಾ ಪಂಚಾಯತದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರತ್ನಾಕರ ನಾಯ್ಕ ಇವರು ಮಾತನಾಡಿ ಕಡಲ ತೀರದ ಯುವಕ ಮಿತ್ರ ಮಂಡಳಿಯವರ ಸಂಘಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಿದರು. ಇದೇ ಊರಿನ ಮೀನುಗಾರರಾದ ಲಕ್ಷ್ಮಣ ಹರಿಕಾಂತ ಇವರು ಮೀನುಗಾರಿಕೆಗೆ ತೆರಳಿದಾಗ ನಾಪತ್ತೆಯಾಗಿದ್ದು ಇಲ್ಲಿಯವರೆಗೆ ಪತ್ತೆಯಾಗದಿರುವುದು ದುರ್ದೈವದ ಸಂಗತಿಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರವಾರ ಮೀನುಗಾರಿಕಾ ಪೆಡರೇಶನ್ ಅಧ್ಯಕ್ಷರಾದ ಗಣಪತಿ ಮಾಂಗ್ರೆ ಮಾತನಾಡಿ ನಮ್ಮ ಕುಲಬಾಂಧವರು ಮೀನುಗಾರಿಕೆಯೊಂದಿಗೆ ಶಿಕ್ಷಣ, ರಾಜಕೀಯ, ಸಾಮಾಜಿಕ ಇನ್ನಿತರ ಕ್ಷೇತ್ರಗಳಲ್ಲಿಯೂ ಪ್ರಗತಿ ಹೊಂದಬೇಕು ಎಂದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಪಿ.ಎಸ್.ಐ. ಸಂಪತ್ ಕುಮಾರ ಇವರು ಮಾತನಾಡಿ ಯುವಕರು ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸಮಾಜಕ್ಕೆ ಸಹಕರಿಸಬೇಕು ಎಂದರು. ಸನ್ಮಾನ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕøತರಾದ ಎಂ.ಆರ್. ಹೆಗಡೆ, ಹೊಲನಗದ್ದೆ ಶಾಲಾ ಮುಖ್ಯಾಧ್ಯಾಪಕರಾದ ಗಣಪತಿ ನಾಯ್ಕ, ನಿವೃತ್ತ ಶಿಕ್ಷಕ ಜಿ.ಜಿ. ಪಟಗಾರ, ಮಾಜಿ ಸೈನಿಕ ನಾರಾಯಣ ನಾಗಪ್ಪ ಹರಿಕಾಂತ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶ್ರೀಮತಿ ದೀಪಾ ಹಿಣಿ, ವಾಲಿಬಾಲ್ ಆಟಗಾರ ರವಿ ಮುಕ್ರಿ, ನೃತ್ಯಪಟು ಕುಮಾರಿ ಅಂಕಿತಾ ಉಮಾಕಾಂತ ಹೊಸ್ಕಟ್ಟಾ, ಯಕ್ಷಗಾನ ಬಾಲ ಕಲಾವಿದರಾದ ಶ್ರೀಧರ ಹರಿ ನಾಯ್ಕ, ದಿಗಂಬರ ನರಸಿಂಹ ನಾಯ್ಕ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಎಂ.ಆರ್. ಹೆಗಡೆಯವರು ಮಾತನಾಡಿ ನಮ್ಮ ವೀರಯೋಧರು ದೇಶ ರಕ್ಷಣೆಯಲ್ಲಿ ತೊಡಗಿರುವುದರಿಂದ ನಾವೆಲ್ಲಾ ಸುರಕ್ಷಿತವಾಗಿರಲು ಸಾಧ್ಯವಿದೆ. ದೇಶದ ರಕ್ಷಣೆಗಾಗಿ ನಾವೆಲ್ಲಾ ಪಣ ತೊಡೋಣ ಎಂದರು.
ನಿವೃತ್ತ ಶಿಕ್ಷಕರಾದ ಜಿ.ಜಿ. ಪಟಗಾರ ಇವರು ಮಾತನಾಡಿ ಕಡಲ ತೀರದ ಯುವಕ ಮಿತ್ರ ಮಂಡಳಿಯವರು ಇಂದು ರಕ್ಷಕರನ್ನು, ಶಿಕ್ಷಕರನ್ನು, ಮಕ್ಕಳು, ಮಾತೆಯರನ್ನೆಲ್ಲಾ ಸನ್ಮಾನಿಸಿರುವುದು ಶ್ಲಾಘನೀಯ ಎಂದರು. ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವವರೆಲ್ಲರೂ ಬದುಕಿ ಬಂದು ನಮ್ಮೊಂದಿಗೆ ಸೇರಿಕೊಳ್ಳುವಂತಾಗಲಿ ಎಂದರು. ವೇದಿಕೆಯಲ್ಲಿ ತದಡಿ ಮೀನುಗಾರಿಕಾ ಯುನಿಯನ್ ಅಧ್ಯಕ್ಷರಾದ ನಾಗರಾಜ ಹರಿಕಾಂತ, ಶಾಲಾ ಮುಖ್ಯಾಧ್ಯಾಪಕರಾದ ಗಣಪತಿ ಜಿ. ನಾಯ್ಕ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಮೊದಲು ಹುತಾತ್ಮ ಯೋಧರಿಗೆ ಮೌನ ಪ್ರಾರ್ಥನೆ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು. ಕಡಲ ತೀರದ ಯುವಕ ಮಿತ್ರ ಮಂಡಳಿಯ ಅಧ್ಯಕ್ಷರಾದ ಶ್ರೀಧರ ಹರಿಕಾಂತ ಸ್ವಾಗತಿಸಿದರು.
ಸಂಘದ ಸದಸ್ಯರಾದ ಚಂದ್ರಕಾಂತ ಹರಿಕಾಂತ ನಿರೂಪಿಸಿ, ವಂದಿಸಿದರು. ಕಾರ್ಯದರ್ಶಿ ನಾಗರಾಜ ಹರಿಕಾಂತ, ಉಪಾಧ್ಯಕ್ಷ ಗಣಪತಿ ಹರಿಕಾಂತ, ಸದಸ್ಯರಾದ ರಾಮಚಂದ್ರ, ನಾಗೇಶ, ಘಟಬೀರ, ರಾಜು, ರಮಾಕಾಂತ, ಚಂದ್ರು. ರಮೇಶ, ರಾಜು, ಇನ್ನಿತರರು ಸಹಕರಿಸಿದರು. ನಂತರ ಹೊನ್ನಾವರ ಕಲಾತಂಡದಿಂದ ನೃತ್ಯಸಂಜೆ ಕಾರ್ಯಕ್ರಮ ಪ್ರೇಕ್ಷಕರ ಮನರಂಜಿಸಿತು.