ಗೋಕರ್ಣ: ಮಹಾಶಿವರಾತ್ರಿ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಗುರುವಾರ ಮಹಾಭಲೇಶ್ವರ ಮಹಾರಥೋತ್ಸವವು ಸಹಸ್ರಾರ ಭಕ್ತರ ನಡುವೆ ಸಡಗರ ಸಂಭ್ರಮದಿಂದ ಜರುಗಿತು.
ರಾಮಚಂದ್ರಾಪುರದ ಶ್ರೀ ಶ್ರೀ ರಾಘವೇಶ್ವರಭಾರತೀ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ದಾರ್ಮಿಕ ಕಾರ್ಯಕ್ರಮ ಹಾಗೂ ರಥೋತ್ಸವ ಅತ್ಯಂತ ವಿಜ್ರಂಭಣೆಯಿಂದ ಸಂಪನ್ನವಾಯಿತು.
ಭಕ್ತರು ಶ್ರೀ ಹರ..ಹರ …. ಮಹಾದೇವ , ಜಯಶಂಕರ ಎಂಬ ಘೋಷಣೆ ಕೂಗುತ್ತ ಸಂಭ್ರಮದ ರಥೋತ್ಸವಕ್ಕೆ ಸಾಕ್ಷಿಯಾದರು.
ರಥದ ಜಾಗದಿಂದ ವೆಂಕಟ್ರಮಣ ದೇವಾಲಯದವರೆಗೂ ಶ್ರೀ ಮಹಾಭಲೇಶ್ವರ ರಥವನ್ನು ಭಕ್ತರು ಎಳೆದು ಭಕ್ತಿ ಭಾವ ಮೆರೆದರು.
ಅರ್ಚಕರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ಬೆಳಗಿನಿಂದ ಪ್ರಾರಂಭಗೊಂಡಿದ್ದವು. ಲೋಕೋಪಯೋಗಿ ಇಲಾಖೆಯಿಂದ ರಥದ ತಾಂತ್ರಿಕ ತಪಾಸಣೆಯನ್ನು ನಿರ್ವಹಿಸಲಾಯಿತು.
ರಥ ನಿರ್ಮಾಣಕಾರ ಹಾಲಕ್ಕಿ ಜನಾಂಗದ ಪ್ರಮುಖ, ವಿವಿಧ ಸೇವಾಕಾರ‌್ಯದಲ್ಲಿ ತೊಡಗುವ ಮೂಲಕ ರಥೋತ್ಸವಕ್ಕೆ ಚೈತನ್ಯ ತುಂಬಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ತಮ್ಮ ಕಾರ್ಯ ನಿರ್ವಹಿಸಿದರು.
ಭಕ್ತಾದಿಗಳು ಶಿವರಾತ್ರಿ ಪ್ರಯುಕ್ತ ವಿವಿಧ ತಿಂಡಿ ತಿನಿಸುಗಳ ಖರೀದಿಯಲ್ಲಿ ತೊಡಗಿದ್ದರು. ಅಂಗಡಿ ಮುಗ್ಗಟ್ಟುಗಳಲ್ಲಿ ವ್ಯಾಪಾರ ಭರ್ಜರಿಯಾಗಿತ್ತು. ವಿವಿಧೆಡೆಯಿಂದ ಆಗಮಿಸಿದ್ದ ವಾದ್ಯಮೇಳಗಳೊಂದಿಗೆ ಸಾಗಿದ ರಥೋತ್ಸವದಲ್ಲಿ ನೂರಾರು ವಿದೇಶಿ ಪ್ರವಾಸಿಗರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.