ಮಾರಣಾಂತಿಕ ಮಂಗನಕಾಯಿಲೆ ಮಲೆನಾಡು ಭಾಗದಲ್ಲಿ ಮತ್ತೆ ತೀವ್ರ ಸ್ವರೂಪವನ್ನು ಪಡೆಯುತ್ತಿದ್ದು, ಈ ಕುರಿತಾಗಿ ಇನ್ನಷ್ಟು ತೀವ್ರಗತಿಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು, ಮಂಗನಕಾಯಿಲೆ ಪೀಡಿತರಾದವರಿಗೆ ಸಮರ್ಪಕ ಚಿಕಿತ್ಸೆ ದೊರೆಯುವಂತೆ ಮಾಡಬೇಕು ಹಾಗೂ  ಸಮಗ್ರ ಸಂಶೋಧನೆ ನಡೆಸಿ; ಮಂಗನಕಾಯಿಲೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಮಸ್ತ ಹವ್ಯಕ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀ ಅಖಿಲ ಹವ್ಯಕ ಮಹಾಸಭಾ ಸರ್ಕಾರವನ್ನು ಆಗ್ರಹಿಸುತ್ತದೆ.

ಅಸಮರ್ಪಕ ಔಷದೋಪಚಾರ, ಅಸಮರ್ಪಕ ಮಾಹಿತಿಗಳಿಂದಾಗಿ ಜನರು ಭಯಭೀತರಾಗಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ದಶಕಗಳ ಹಿಂದೆಯೇ ಕಾಣಿಸಿಕೊಂಡಿದ್ದ ಈ ಕಾಯಿಲೆಗೆ ಇಂದಿನವರೆಗೂ ಸಮರ್ಪಕ ಸಂಶೋಧನೆ ನಡಸದೇ, ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳದೇ ಇರುವುದು ಬೇಸರದ ಸಂಗತಿ.

RELATED ARTICLES  ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು; ಆರ್.ವಿ.ದೇಶಪಾಂಡೆ

ಈಗಾಗಲೇ ಅನೇಕ ಕಷ್ಟಗಳಿಂದ ಪೀಡಿತರಾಗಿರುವ ಹಳ್ಳಿಗರು, ಮಂಗನಕಾಯಿಲೆಯಿಂದಾಗಿ ಮತ್ತಷ್ಟು ತೊಂದರೆಗೆ ಒಳಗಾಗಿದ್ದಾರೆ. ಜ್ವರ ಕಾಣಿಸಿಕೊಂಡಿತೆಂದರೆ ದೂರದ ಮಣಿಪಾಲಕ್ಕೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವ – ಚಿಕಿತ್ಸೆ ಪಡೆಯುವ ಶೋಚನೀಯ ಸ್ಥಿತಿ ಎದುರಾಗಿದೆ. ಮಂಗನಕಾಯಿಲೆ ತಡೆಗೆಂದು ಕೊಡುತ್ತಿರುವ ಲಸಿಕೆಗಳು ಕೂಡ ಹಳೆಯ ಲಸಿಕೆಗಳಾಗಿವೆ ಎಂಬ ಕೂಗು ಹಳ್ಳಿಗರಲ್ಲಿ ಕೇಳಿಬರುತ್ತಿದೆ.

ಯಾವುದೇ ವಿಳಂಬ ಧೋರಣೆಯನ್ನು ಅನುಸರಿಸದೇ ತಕ್ಷಣ ಸಮರ್ಪಕ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು, ಕನಿಷ್ಟಪಕ್ಷ ತಾಲೂಕು ಕೇಂದ್ರಗಳಲ್ಲಿ ಸೂಕ್ತ ಹಾಗೂ ಸಕಾಲಿಕ ಚಿಕಿತ್ಸೆ ದೊರೆಯುವಂತೆ ಮಾಡಬೇಕು, ಈಗಾಗಲೇ ಈ ಮಾರಣಾಂತಿಕ ಕಾಯಿಲೆಗೆ ಬಲಿಯಾದವರಿಗೆ ಸಮರ್ಪಕ ಪರಿಹಾರವನ್ನು ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ ಈ ಕಾಯಿಲೆ ಬಾಧಿಸದಂತೆ ತಡೆಯಲು ಉನ್ನತಮಟ್ಟದ ಸಂಶೋಧನೆ ನಡೆಸಿ ; ಸಮರ್ಪಕವಾದ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ಆ ಭಾಗಗಳ ಹವ್ಯಕ ಬಾಂಧವರು ಹಾಗೂ  ಸರ್ವಸಮಾಜದ ಜನರ ಹಿತಕ್ಕಾಗಿ ಶ್ರೀ ಅಖಿಲ ಹವ್ಯಕ ಮಹಾಸಭಾ ಆಗ್ರಹಿಸುತ್ತದೆ.  
ಎಂದು ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ) ದ ಅಧ್ಯಕ್ಷರಾದ ಡಾ. ಗಿರಿಧರ ಕಜೆಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

RELATED ARTICLES  ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ವಂಚನೆ ಆರೋಪ; ಆರೋಪಿ ಬಂಧನ