ಗೋಕರ್ಣ : ಸ್ಟಾರ್ ಬಾಯ್ಸ್ ಗೋಕರ್ಣ ಇವರ ಆಶ್ರಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಜಿಲ್ಲಾ ಮಟ್ಟದ ಹಗ್ಗ-ಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಯಾವುದೇ ಸಮಾಜದ ಅಭಿವೃದ್ಧಿಯಾಗಬೇಕಾದರೆ ವೈಮನಸ್ಸನ್ನು ಬಿಟ್ಟು ಒಂದಾಗಿ ದುಡಿದರೆ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಅಂಬಿಗ ಸಮಾಜದ ಮೀನುಗಾರ ಬಾಂಧವರು ಸಮಾಜದ ಅಭಿವೃದ್ಧಿಯ ದಿಶೆಯಲ್ಲಿ ಎಲ್ಲರೂ ಒಂದಾಗಿ ಕುಳಿತು ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದ ಅವರು ಸ್ಪರ್ಧಾ ಕಾರ್ಯಕ್ರಮ ನಿರಾತಂಕವಾಗಿ ಯಶಸ್ವಿಯಾಗಿ ನಡೆಯಲಿ ಅಂತಲೂ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉ.ಕ ಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ ನಾಯಕ ವಹಿಸಿದ್ದರು. ವೇದಿಕೆಯಲ್ಲಿ ಜಿ. ಪಂ. ಸದಸ್ಯ ಜಗನ್ನಾಥ ನಾಯ್ಕ, ಕುಮಟಾ ತಾಲೂಕಾ ಪಂಚಾಯತ ಸದಸ್ಯ ಮಹೇಶ ಶೆಟ್ಟಿ, ಗ್ರಾ ಪಂ ಸದಸ್ಯ ಮಂಜುನಾಥ ಜನ್ನು, ಅರ್ಬನ್ ಬ್ಯಾಂಕ್ ನಿರ್ದೇಶಕ ರಾಜಗೋಪಾಲ ಅಡಿ, ಹೂವಾ ಖಂಡೇಕರ, ಅಂಬಿಗ ಸಮಾಜದ ಮುಖಂಡ ಮಂಕಾಳಿ ಅಂಬಿಗ, ಗಂಗಾಮಾತಾ ಅಂಬಿಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಜನಾರ್ಧನ ಅಂಬಿಗ ಹಾಗೂ ದೀವಗಿಯ ಚೇತನ ಸೇವಾ ಸಂಸ್ಥೆಯ ಅಧ್ಯಕ್ಷ ಆರ್ ಕೆ ಅಂಬಿಗ ಉಪಸ್ಥಿತರಿದ್ದು ಮಾತನಾಡಿದರು. ಕು ಅಕ್ಷತಾ ಸಂಗಡಿಗರು ಸಹಕರಿಸಿದರು.
ಗೋಕರ್ಣ ದಂಡೆಬಾಗದ ಬೀಚಿನಲ್ಲಿ ಸಮುದ್ರ ರೇತಿಯ ಮಧ್ಯೆ ಸುಂದರವಾದ ವೇದಿಕೆ ಹಾಗೂ ಅಂಕಣ ನಿರ್ಮಾಣ ಅದ್ಭುತವಾಗಿತ್ತು.