ಕುಮಟಾ: ಹವ್ಯಕ ಸಭಾಭವನದಲ್ಲಿ ಜಿಲ್ಲಾ ಬಿಜೆಪಿ ಯುವಮೋರ್ಚಾದ ವತಿಯಿಂದ ಹಮ್ಮಿಕೊಂಡ ಕರಾವಳಿ ಭಾಗದ ಯುವಮೋರ್ಚಾ ಕಾರ್ಯಕರ್ತರ ಸಮಾವೇಶ ಯಶಸ್ವಿಯಾಗಿ ಸಂಪನ್ನವಾಯಿತು. ಈ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆಯವರು ಕಾಂಗ್ರೆಸ್ ವಿರುದ್ಧವಾಗಿ ವಾಗ್ದಾಳಿ ನಡೆಸಿದರು.
ತಮ್ಮ ರಕ್ತದ ಪರಿಚಯವಿಲ್ಲದ ಗಾಂಧಿಕುಟುಂಬಕ್ಕೆ ದಾಳಿಯ ಸಾಕ್ಷಿ ಕೊಡಲಾಗುವುದಿಲ್ಲ. ಕೇಳುವ ಅರ್ಹತೆಯೂ ಅವರಿಗಿಲ್ಲ. ಕಾಂಗ್ರೆಸ್ ಪಕ್ಷ ಸತತ 70 ವರ್ಷ ನಡೆಸಿದ ಆಳ್ವಿಕೆಯಿಂದಾಗಿ ತಲೆತಗ್ಗಿಸಿ ನಡೆಯುತ್ತಿದ್ದ ಭಾರತ ಇಂದು ಅಟಲಬಿಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿಯವರ ಪ್ರಭಾವದಿಂದ ಬಲಿಷ್ಟ ದೇಶದ ಎದುರು ತಲೆ ಎತ್ತಿ ನಡೆಯುವಂತಾಗಿದೆ. ಇಂತಹ ದೇಶದ ಮಣ್ಣಿನ ಸಂಸ್ಕೃತಿಯನ್ನು ಅರಿಯದವರು ಹಾಗೂ ಅಪ್ಪ ಅಮ್ಮನ ಹೆಸರನ್ನು ಹೇಳಲು ಯೋಗ್ಯತೆ ಇಲ್ಲದವರು ದೇಶ ಆಳುವ ಕನಸು ಕಾಣುತ್ತಿದ್ದಾರೆ. ಹೈಬ್ರಿಡ್ ಸಂಸ್ಕೃತಿ ಹೊಂದಿರುವವರಿಂದ ಈ ದೇಶ ಕಟ್ಟಲು ಸಾಧ್ಯವಿಲ್ಲ ಎಂದ ಅವರು ಪುಲ್ವಾಮಾದಲ್ಲಿ ಭಯೋತ್ಪಾದಕರು ಭಾರತೀಯ ಸೈನಿಕರ ಮೇಲೆ ನಡೆಸಿದ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೈನಿಕರು ಪಾಕಿಸ್ತಾನಕ್ಕೆ ನುಗ್ಗಿ ವೈಮಾನಿಕ ದಾಳಿ ನಡೆಸಿರುವುದಕ್ಕೆ ಸಾಕ್ಷಿ ಕೇಳುವ ಮೊದಲು ಖಾನ್ ಕುಟುಂಬದವರು ಹೇಗೆ ಗಾಂಧಿ ಕುಟುಂಬದವರಾದರು ಎಂಬುದನ್ನು ಸಾಕ್ಷಿ ಸಮೇತವಾಗಿ ಕಾಂಗ್ರೆಸಿಗರು ಬಹಿರಂಗಪಡಿಸುವರೆ ಎಂದು ಗುಡಿಗಿದರು. ರಾಹುಲ್ ಗಾಂಧಿಯ ಡಿ.ಎನ್.ಎ ಪರೀಕ್ಷೆ ಬೇಡ ಪ್ರಿಯಾಂಕಾ ಗಾಂಧಿಯ ಡಿ.ಎನ್ ಎ ಪರೀಕ್ಷೆ ಮಾಡಿಸಿ ಎಂದಿದ್ದಾರೆಂದು ವ್ಯಂಗ್ಯ ಮಾಡಿದರು.
ಇಂದು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ವಾತಾವರಣ ನಿರ್ಮಾಣವಾಗಿದೆ.ತನ್ನ ಮನೆಮುರಕು ಕಾರ್ಯದಿಂದ ಕಾಂಗ್ರೆಸ್ ಪಕ್ಷ ಯಾವ ರೀತಿ ಅಧೋಗತಿಯತ್ತ ಸಾಗಿದೆ ಎಂಬುದಕ್ಕೆ ಆ ಪಕ್ಷದ ಅಧ್ಯಕ್ಷರು ದೇವೆಗೌಡರ ಮನೆಯಲ್ಲಿ ಕುಳಿತು ದೇವೆಗೌಡರಿಗಾಗಿ ಕಾಯುತ್ತಿರುವುದೇ ಸಾಕ್ಷಿಯಾಗಿದೆ. ಜೆಡಿಎಸ್ ನಾಯಕರ ಕುಟುಂಬ ರಾಜಕಾರಣ ಎಲ್ಲರಿಗೂ ಬೇಸರ ತರಿಸಿದೆ. ಸರ್ಕಾರ ಬಲಿಷ್ಠವಿದ್ದರೆ ಅಭಿವೃದ್ಧಿ ಕೆಲಸಗಳು ತನ್ನಿಂದ ತಾನೇ ಆಗುತ್ತವೆ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೋರಿಸಿಕೊಟ್ಟಿದೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ 300ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಪಕ್ಷದ ಸದಸ್ಯರ ಸಮಸ್ಯೆಯನ್ನು ನಾಯಕರು ಬಗಹರಿಸುವುದು ತೀರಾ ಅವಶ್ಯವಿದೆ ಎಂದರು.
ರಾಜ್ಯ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶ ಗೌಡ , ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ , ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಮಂಜುನಾಥ ಜನ್ನು ,ಪಕ್ಷದ ಜಿಲ್ಲಾ ಉಸ್ತುವಾರಿ ಭವಾನಿರಾಮ ಮೊರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸಳೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರುಪ್ರಸಾದ ಹೆಗಡೆ, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ ಮುತ್ತಾಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ದೇವರಹಳ್ಳಿ, ಪಕ್ಷದ ರಾಜ್ಯ ವಕ್ತಾರ ಪ್ರಮೋದ ಹೆಗಡೆ ಹಾಗೂ ಕರಾವಳಿ ಭಾಗದ ತಾಲೂಕಾ ಮಂಡಲಾಧ್ಯಕ್ಷರು ಉಪಸ್ಥಿತರಿದ್ದರು.