ಗೋಕರ್ಣ : ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ, ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವಿಲಂಬಿ ಸಂವತ್ಸರದ ಶಿವರಾತ್ರಿ ಮಹೋತ್ಸವವು ಮಂಗಲವಾಯಿತು .
ಕೊನೆಯ ದಿನ ಕೋಟಿತೀರ್ಥದಲ್ಲಿ ಜಲಯಾನೋತ್ಸವ , ದೀಪೋತ್ಸವ , ಅಂಕುರಾರ್ಪಣೆ , ನಂದಿ ಧ್ವಜಾವರೋಹಣ ನಡೆಯಿತು . ಮುಖ್ಯ ಅರ್ಚಕರಾದ ವೇ . ಮೂ . ಶಿತಿಕಂಠ ಹಿರೇ ಭಟ್ಟ ಇವರ ನೇತೃತ್ವದಲ್ಲಿ ತಾಂತ್ರಿಕತೆಯಲ್ಲಿ ಜಗತ್ರ್ಪಸಿದ್ಧ ಶಿವರಾತ್ರಿ ಮಹೋತ್ಸವ ಸಂಪನ್ನಗೊಂಡಿತು .
ಈ ಸಮಯದಲ್ಲಿ ನಿವೃತ್ತ ಡಿಎಫ್‍ಒ ನಾಗರಾಜ ನಾಯಕ ತೊರ್ಕೆ ಇವರ ನೇತೃತ್ವದಲ್ಲಿ ನಾಡವ ಸಮಾಜದ ಅನೇಕರು ಶ್ರೀರಾಮಚಂದ್ರಾಪುರ ಮಠದ ಮೂಲ ತಾಣ ಇಲ್ಲಿನ ಅಶೋಕೆಯಲ್ಲಿ ವಾಸ್ತವ್ಯದಲ್ಲಿರುವ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಆಶೀರ್ವಾದ ನೀಡಿ ಮಾತನಾಡಿದ ಶ್ರೀಗಳು ಮಹಾಬಲೇಶ್ವರ ಮಂದಿರ ಮತ್ತು ಗೋಕರ್ಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗ ಬೇಕಾಗಿವೆ. ಮಹಾಶಿವರಾತ್ರಿ ಸೇರಿ ಮಂದಿರದ ಪ್ರಮುಖ ಉತ್ಸವಾದಿಗಳಲ್ಲಿ ಎಲ್ಲರೂ ಪಾಲ್ಗೊಂಡು ಅದನ್ನು ಸರ್ವರ ಉತ್ಸವವಾಗಿ ಮಾಡ ಬೇಕು. ಕಾರಣ ಶ್ರೀ ಮಠದ ಅಭಿವೃದ್ಧಿ ಪರ ಕಾರ್ಯಗಳಲ್ಲಿ ಎಲ್ಲರೂ ಕೈಜೋಡಿಸುವಂತೆ ಶ್ರೀಗಳು ಕರೆಯಿತ್ತರು.
ಈ ವೇಳೆ ಉದ್ಯಮಿ ಆನಂದ ಕವರಿ,ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ರಾಮು ಕೆಂಚನ್, ಬ್ಯಾಂಕ್ ನಿರ್ದೇಶಕ ಅರುಣ ಕವರಿ, ಹಿರೇಗುತ್ತಿ ಯುವ ಸಂಘ ಅಧ್ಯಕ್ಷ ರಾಜು ಗಾಂವಕರ, ನಿವೃತ್ತ ಶಿಕ್ಷಕ ಬೀರಣ್ಣ ನಾಯಕ ಮುಂತಾದವರಿದ್ದರು.