ಹೊನ್ನಾವರ: ಕೊಲ್ಲೂರಿಗೆ ಸಮೀಪದ ಎಳಜಿತ್ ಎಂಬಲ್ಲಿ ಯಕ್ಷಗಾನ ಕಾರ್ಯಕ್ರಮದಲ್ಲಿ ಬಡಗುತಿಟ್ಟಿನ ಪ್ರಖ್ಯಾತ ಕಲಾವಿದ ಹುಡುಗೋಡು ಚಂದ್ರಹಾಸ ಅವರು ವೇದಿಕೆಯಲ್ಲೇ ಕುಸಿದು ವಿಧಿವಶರಾದ ಘಟನೆ ನಡೆದಿದೆ.
ಭೀಷ್ಮ ವಿಜಯ ಪ್ರಸಂಗದಲ್ಲಿ ಸಾಲ್ವನ ಪಾತ್ರ ನಿರ್ವಹಿಸಿದ ಹುಡುಗೋಡು ಚಂದ್ರಹಾಸ ಅವರು ಭೀಷ್ಮ ಎನ್ನುವ ಉದ್ಘಾರ ಮಾಡುತ್ತಲೆ ವೇದಿಕೆಯಲ್ಲೇ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣ ಸಹಕಲಾವಿದರು ಮತ್ತು ಸ್ಥಳದಲ್ಲಿದ್ದವರು ಮೇಲಕ್ಕೆತ್ತಿದರು.ಆದರೆ ಅದಾಗಲೇ ಕಲಾಮಾತೆಯ ಮಡಿಲನ್ನು ಅವರು ಸೇರಿ ಆಗಿತ್ತು ಎನ್ನಲಾಗಿದೆ.
ಕಲಾಧರ ಬಳಗ ಹೊನ್ನಾವರ ತಂಡದ ಯಕ್ಷಗಾನ ಕಾರ್ಯಕ್ರಮದಲ್ಲಿ ಅತಿಥಿ ಕಲಾವಿದರಾಗಿ ಆಗಮಿಸಿದ್ದ ಹುಡುಗೋಡು ಅವರು ಬಹುಜನರ ಅಪೇಕ್ಷೆ ಮೇರೆಗೆ ಸಾಲ್ವನಾಗಿ ಅಭಿನಯಿಸುತ್ತಿದ್ದರು.
ಪ್ರಖ್ಯಾತ ಕಲಾವಿದರಾಗಿದ್ದ ಅವರು ಡೇರೆ ಮೇಳಗಳಾಗಿದ್ದ ಸಾಲಿಗ್ರಾಮ,ಪೆರ್ಡೂರು ಮುಂತಾದ ಮೇಳಗಳಲ್ಲಿ ದಶಕಗಳ ಕಾಲ ತಿರುಗಾಟ ಮಾಡಿ ತನ್ನದೇ ಆದ ಛಾಪು ಮೂಡಿಸಿದ್ದರು. ನೂತನ ಪ್ರಸಂಗಳಲ್ಲೂ ಖಳ ಪಾತ್ರಧಾರಿಯಾಗಿ ಅಬ್ಬರಿಸುತ್ತಿದ್ದರು.
ಸಾಲ್ವ, ಭೀಮ, ಕೌರವ, ಹನುಮಂತ, ಕೀಚಕ ಹೀಗೆ ಹಲವು ವೇಷಗಳಲ್ಲಿ ತನ್ನದೇ ಆದ ಪ್ರತಿಭೆ ಮೆರೆದು ಖ್ಯಾತರಾಗಿದ್ದರು. ಅಭಿನವ ಸಾಲ್ವ ಎಂದೇ ಅವರನ್ನು ಜನ ಗುರ್ತಿಸಿ ಗೌರವಿಸಿದ್ದರು.
ರಾಜಕೀಯ ರಂಗಕ್ಕೆ ಕಾಲಿರಿಸಿದ್ದ ಅವರು ಉತ್ತರಕನ್ನಡದ ಹಡಿನಬಾಳ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾಗಿದ್ದರು. ರಾಜಕೀಯಕ್ಕೆ ಕಾಲಿಟ್ಟ ಬಳಿಕ ವೃತ್ತಿರಂಗದಿಂದ ದೂರವಾಗಿ ಹವ್ಯಾಸಿಯಾಗಿ ಕಲಾ ಸೇವೆ ಮುಂದುವರಿಸಿದ್ದರು, ಮಾತ್ರವಲ್ಲದೆ ತನ್ನದೆ ಆದ ಕಲಾ ಬಳಗವೊಂದನ್ನು ಕಟ್ಟಿಕೊಂಡಿದ್ದರು.