ಕಾರವಾರ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಚುನಾವಣಾ ಆಯೋಗದ ನಿರ್ದೇಶನದಂತೆ ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 1,437 ಮತಗಟ್ಟೆಗಳನ್ನು ರಚಿಸಲಾಗಿದೆ.
ಈ ವರ್ಷದ ಜ.1ರಿಂದ ಜ.16ರ ವರೆಗೆ ಸಿದ್ಧಗೊಂಡ ಮತದಾರರ ಪಟ್ಟಿಯ ಪ್ರಕಾರ 7,78,350 ಗಂಡು, 7,55,678 ಹೆಣ್ಣು, ಎಂಟು ಇತರೆ ಸೇರಿ 15,34,036 ಮಂದಿ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತಿಯೊಂದು ಮತಗಟ್ಟೆಗೂ ಕುಡಿಯುವ ನೀರು, ಪ್ರತ್ಯೇಕ ಶೌಚಾಲಯ, ವಿದ್ಯುತ್, ಮತದಾನಕ್ಕೆ ಅಗತ್ಯ ಪೀಠೋಪಕರಣಗಳನ್ನು ಒದಗಿಸಲಾಗುತ್ತಿದೆ. ಪ್ರತಿಯೊಂದೂ ವಿಧಾನಸಭಾ ಕ್ಷೇತ್ರದಲ್ಲಿ ಅಂಗವಿಕಲರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಮತಗಟ್ಟೆಯನ್ನು ಮಾದರಿ ಮತಗಟ್ಟೆಯನ್ನಾಗಿ ಗುರುತಿಸಲಾಗಿದೆ ಎಂದರು.
ಶೇ.100ರಷ್ಟು ಭಾವಚಿತ್ರ ಇರುವ ಮತದಾರರ ಪಟ್ಟಿಯನ್ನು ಪ್ರಸ್ತುತ ಚುನಾವಣೆಗೆ ಬಳಸಲಾಗುತ್ತದೆ. ಪ್ರಸ್ತುತ ಚುನಾವಣೆಯಲ್ಲಿ ಖಾಲಿ ವೋಟರ್ ಸ್ಲಿಪ್ ಗಳನ್ನು ಮಸ್ಟರಿಂಗ್ ದಿನಾಂಕದಂದು ವಿತರಿಸಲಾಗುತ್ತದೆ. ಭಾರತದ ಚುನಾವಣಾ ಆಯೋಗದ ಆದೇಶದ ಪ್ರಕಾರ 1) ಪಾಸ್ಪೋರ್ಟ್, 2) ಚಾಲನಾ ಪರವಾನಗಿ, 3) ಕೇಂದ್ರ/ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಪಿಎಸ್ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ತಮ್ಮ ಸಿಬ್ಬಂದಿಗೆ ನೀಡಿರುವ ಫೋಟೋ ಗುರುತಿನ ಚೀಟಿ, 4) ಬ್ಯಾಂಕ್ / ಪೋಸ್ಟ್ ಆಫೀಸ್ ಫೋಟೋವುಳ್ಳ ಪಾಸ್ ಬುಕ್, 5) PAN ಹೊಂದಿರುವ ಕಾರ್ಡ್, 6) ಎನ್ಪಿಆರ್ ಅಡಿ ಅರ್ಜಿ ನೀಡಿರುವ ಸ್ಮಾರ್ಟ್ ಕಾರ್ಡ್, 7) ಎಂನರೇಗಾ ಜಾಬ್ ಕಾರ್ಡ್, 8) ಕಾರ್ಮಿಕರ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, 9) ಫೋಟೋವುಳ್ಳ ಪಿಂಚಣಿ ದಾಖಲೆ, 10) ಚುನಾವಣಾ ಆಯೋಗದ ವತಿಯಿಂದ ನೀಡುವ ದೃಢೀಕೃತ ಫೋಟೋ ವೋಟರ್ ಸ್ಲಿಪ್ಸ್, 11) ಆಧಾರ್ ಕಾರ್ಡ್ ಇವುಗಳಲ್ಲಿ ಯಾವುದಾದರೂ ಗುರುತಿನ ಚೀಟಿ ಬಳಸಿ ಮತದಾನ ಮಾಡಬಹುದು ಎಂದು ತಿಳಿಸಿದರು.
ಸದರಿ ಮತಗಟ್ಟೆಯನ್ನು ವಿಶೇಷವಾಗಿ ನೀಲಿ ಬಣ್ಣದಿಂದ ಸಜ್ಜುಗೊಳಿಸಲಾಗುವುದು. ಒಟ್ಟು 12913 ವಿಕಲಚೇತರರನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಲಾಗಿದೆ. ಅಂಧರಿಗಾಗಿ ಬ್ರೈಲ್ ಲಿಪಿಯ ಸೌಲಭ್ಯವನ್ನು ಒದಗಿಸಲಾಗುವುದು. ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ ಮತ್ತು ಕ್ಯಾಂಪ್ ಸೌಲಭ್ಯ ಕಲ್ಪಿಸಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ ಮತ್ತು ಪ್ರಥಮ ಚಿಕಿತ್ಸಾ ಸೌಲಭ್ಯ ಸಹ ಕಲ್ಪಿಸಲಾಗುವುದು. ಮತಗಟ್ಟೆಗಳ ಪ್ರವೇಶಕ್ಕೆ ಆದ್ಯತೆ ನೀಡಲಾಗುವುದು. ವಾಹನ ನಿಲುಗಡೆಗೆ ವಿಶೇಷ ಸ್ಥಳಾವಕಾಶ ಕಲ್ಪಿಸಲಾಗುವುದು. ಮಾದರಿ ಮತಗಟ್ಟೆಗಳಿಗೆ ವಿಕೇತನ ಅಧಿಕಾರಿಗಳನ್ನು ಮತಗಟ್ಟೆ ಅಧಿಕಾರಿಗಳನ್ನಾಗಿ ನೇಮಿಸಲು ಪ್ರಾಶಸ್ತ್ಯ ನೀಡಲಾಗುವದು ಎಂದು ವಿವರಿಸಿದರು.