ಕುಮಟಾ: ಆತ್ಮ ಮತ್ತು ಮನಸ್ಸಿಗೆ ಆನಂದ ತರುವುದೇ ಆಧ್ಯಾತ್ಮ. ಈ ವಿಶ್ವದಲ್ಲಿ ಯಾವುದು ಶಾಶ್ವತವಲ್ಲ. ಎಲ್ಲವೂ ಒಂದು ದಿನ ನಶಿಸಿ ಹೋಗುತ್ತದೆ. ಅದರಲ್ಲಿ ಉಳಿವುದೊಂದೆ ಜೀವಾತ್ಮ. ಅದನ್ನು ಸದಾ ಸಂತೋಷವಾಗಿಡುವ ಏಕೈಕ ಅಸ್ತ್ರವೆಂದರೆ ಅದು ಆಧ್ಯಾತ್ಮ. ಸಂಸಾರದ ಈ ಸಾಗರದಲ್ಲಿ ತಾಪತ್ರಯಗಳು, ವೇದನೆ, ನೋವು, ಜಿಗುಪ್ಸೆ, ಹತಾಷೆ ಇವೆಲ್ಲ ತಪ್ಪಿದ್ದಲ್ಲ. ಎಲ್ಲವೂ ನಮ್ಮನ್ನು ತಿಂದು ಹಾಕುವುದು. ಕಲಿಯುಗದಲ್ಲಿ ಧರ್ಮದ ಅನುಷ್ಠಾನ ಸುಲಭಸಾಧುವಲ್ಲ. ದೇಹದ ಅಂತರಂಗದಲ್ಲಿರುವ ಶಕ್ತಿ ಆಧ್ಯಾತ್ಮ. ಮಾಯೆಯಿಂದ ನಮ್ಮ ಚಿಂತನಗೆಳು ಮರೆಮಾಚಲ್ಪಟ್ಟಿವೆ. ಸದಾ ನಮ್ಮ ಮನಸ್ಸು ಮತ್ತು ಆತ್ಮಗಳಿಗೆ ಚಿಂತನೆಗೆ ಹುಚ್ಚಬೇಕಾಗಿದೆ. ಮರ್ಕಟ ಮನಸ್ಸು ಬದುಕನ್ನು ದುರಾತ್ಮರನ್ನಾಗಿಸುತ್ತದೆ. ಧರ್ಮ ಮತ್ತು ಆಧ್ಯಾತ್ಮ ಮೇಲ್ನೋಟಕ್ಕೆ ಒಂದೇ ಅನಿಸಿದರೂ ಅವು ನಿಜ ಅರ್ಥದಲ್ಲಿ ವಿಭಿನ್ನವಾಗಿವೆ ಎಂದು ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಅವರು ಧರ್ಮಾಚರಣೆ ಮತ್ತು ಆಧ್ಯಾತ್ಮಿಕತೆ ಕುರಿತು ಸುದೀರ್ಘ ಪ್ರವಚನದ ನೀಡುವ ಮೂಲಕ ವಿಶ್ಲೇಷಿಸಿದರು.
ಅವರು ಪಟ್ಟಣದ ದೇವರಹಕ್ಕಲಿನ ಪುರಾಣ ಪ್ರಸಿದ್ಧ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ನಡೆಯುತ್ತಿರುವ ಅಮೃತ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯ ಪ್ರವಚನಕಾರರಾಗಿ ಸುಲಲಿತವಾಗಿ ಧರ್ಮ ಮತ್ತು ಆತ್ಮಾತ್ಮಿಕತೆಯ ಕುರಿತು ಪ್ರೌಢ ಚಿಂತನೆಯನ್ನು ಪ್ರಚುರ ಪಡಿಸಿದರು. ವಿದ್ವಾನ್ ಗೋಪಾಲಕೃಷ್ಣ ಭಟ್ಟ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ಆಡಳಿತ ಮಂಡಳಿಯ ಪರವಾಗಿ ಎಂ.ಬಿ.ಪೈ ಸ್ವಾಗತಿಸಿದರು. ವಹಿವಾಟ ಮೊಕ್ತೇಸರ ಕೃಷ್ಣ ಬಾಬಾ ಪೈ ಫಲ- ಪುಷ್ಪಾರ್ಚನೆಗೈದರು.
ಎಡನೀರು ಮಠದ ಪ.ಪೂ.ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಕುಮಾರಿ ಶ್ರೇಯಾ ಎಂ.ಪೈ ಪ್ರದರ್ಶಿಸಿದ ಶ್ರೀಮಂತ ಸುಂದರ ಭರತನಾಟ್ಯ ನಯನ ಮನೋಹರವಾಗಿತ್ತು. ರಾಷ್ಟ್ರೀಯ ಮಟ್ಟದ &ಟಿವಿ ಚ್ಯಾನೆಲ್‍ನ ಲವ್ ಮಿ ಇಂಡಿಯಾ ಕಿಡ್ಸ್-2018 ರಲ್ಲಿ ವಿಜೇತ ಕರ್ನಾಟಕದ ಹೆಮ್ಮೆಯ ಬಾಲ ಕಲಾವಿದ ಮೂಲತಃ ಮೂರೂರಿನ ಗುರುಕಿರಣ ಹೆಗಡೆ ನಡೆಸಿಕೊಟ್ಟ ಭಕ್ತಿ ಸಂಗೀತ ಲಹರಿ ಸುಮಧುರವಾಗಿ ಆವಾರದ ತುಂಬೆಲ್ಲಾ ನಾದಮಯವಾಗಿತ್ತು. ಇವರಿಗೆ ಹಾರ್ಮೋನಿಯಂ ವಾಸುದೇವ ತಾಮಣಕರ ಹಾಗೂ ತಬಲಾ ಸಾಥ್ ಬಾಬಾ ಪ್ರಹ್ಲಾದ ಪೈ ನೀಡಿದ್ದರು. ತದನಂತರ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ ಎಡನೀರು, ಕಾಸರಗೋಡ ಅವರಿಂದ ತೆಂಕುತಿಟ್ಟು ಯಕ್ಷಗಾನ ಬಯಲಾಟ ದೇವಿಮಹಾತ್ಮೆ ಅದ್ಧೂರಿಯಾಗಿ ಪ್ರದರ್ಶಿಸಲ್ಪಟ್ಟಿತು.
ಸಂಪೂರ್ಣ ಸಾಂಸ್ಕøತಿಕ ಸಂಚಿಯ ಪರಿಚಯ, ಪ್ರಕಟಣೆ, ನಿರೂಪಣೆ ಹಾಗೂ ನಿರ್ವಹಣೆಯಲ್ಲಿ ಈಶ್ವರ ಭಟ್ಟ, ಮಂಜುನಾಥ ನಾಯ್ಕ, ಜಯದೇವ ಬಳಗಂಡಿ, ಎನ್.ಆರ್.ಗಜು, ಅರುಣ ಮಣಕೀಕರ ಮತ್ತು ಕಿರಣ ಪ್ರಭು ಸಹಕರಿಸಿದರು.