ಕುಮಟಾ: ಶ್ರೀ ಶಾಂತಿಕಾ ಪರಮೇಶ್ವರಿ ದೇವರ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ ಸಾಂಗತ್ಯ ಪ್ರಸ್ತುತ ಶಿಖರ ಮಂಟಪಯುಕ್ತ ದೇವ ಮಂದಿರದ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ ಸಾಂಸ್ಕøತಿಕ ಕಾರ್ಯಕ್ರಮಗಳ ಮೂರನೆಯ ಸಂಚಿಕೆಗೆ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎನ್.ಆರ್.ಗಜು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಶುಭಕೋರಿದರು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ ಪರವಾಗಿ ಎಂ.ಬಿ.ಪೈ, ಝೇಂಕಾರ ಮೆಲೋಡಿಸ್ ಭಟ್ಕಳದ ನಿರ್ದೇಶಕ ಪ್ರಸನ್ನ ಪ್ರಭು, ಗಂಧರ್ವ ಕಲಾಕೇಂದ್ರದ ಪ್ರಾಚಾರ್ಯ ಗೌರೀಶ ಯಾಜಿ, ತಬಲಾ ಕಲಾವಿದ ಬಾಬಾ ಪ್ರಹ್ಲಾದ ಎಂ.ಪೈ ಉಪಸ್ಥಿತರಿದ್ದರು. ಮಂಜುನಾಥ ನಾಯ್ಕ ನಿರೂಪಿಸಿದರೆ, ಅರುಣ ಮಣಕೀಕರ ಪರಿಚಯಿಸಿದರು. ಈಶ್ವರ ಭಟ್ ಮತ್ತು ಕಿರಣ ಪ್ರಭು ನಿರ್ವಹಿಸಿದರು.
ಎಡನೀರು ಮಠದ ಪ.ಪೂ.ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಕುಮಾರ ಬಾಬಾ ಪ್ರಹ್ಲಾದ ಎಂ. ಪೈ ಕೈಚಳಕದ ಸ್ವತಂತ್ರ ತಬಲಾ ವಾದನ ಗೌರೀಶ ಯಾಜಿ ಅವರ ಹಾರ್ಮೋನಿಯಂ ಸಾಥ್‍ನೊಂದಿಗೆ ಸಂಗೀತ ನಾದ ನಿನಾದದಿಂದ ದೇವರಹಕ್ಕಲ ದೇವಸ್ಥಾನದ ಆವಾಸದ ತುಂಬ ಅನುರಣಿಸಿತು.
ತದನಂತರ ಕರ್ನಾಟದಲ್ಲಿಯೇ ಖ್ಯಾತಿ ಪಡೆದ ಝೇಂಕಾರ ಮೆಲೋಡಿಸ್ ಭಟ್ಕಳ ಪ್ರಸ್ತುತಿಯ ಪ್ರಸನ್ನ ಪ್ರಭು ನಿರ್ದೇಶನದಲ್ಲಿ ಮೂಡಿ ಬಂದ ಭಕ್ತಿ, ಭಾವ, ಜಾನಪದ, ಲಾವಣಿಯೇ ಮೊದಲಾದ ಗೀತೆಗಳಿಂದ ಒಡಗೂಡಿದ ವೈವಿಧ್ಯಮಯ ವಿನೂತನ ಸಂಗೀತ ಸಂಜೆ ದೇವಿಯ ಐತಿಹ್ಯವನ್ನೂ ಸಾರುತ್ತಾ ಯುವಜನಾಂಗಕ್ಕೆ ಸಂಗೀತದೊಲವು ಮೂಡಿಸುವಲ್ಲಿ ಅಪಾರ ಯಶಸ್ವಿಯಾಯಿತು.
ಈ ಮೊದಲು ಮುಂಜಾನೆಯಿಂದ ಶ್ರೀ ಗಣೇಶ ಪೂಜಾ, ಪುಣ್ಯಾಹ, ಅಧಿವಾಸ ಹೋಮ, ತತ್ವಕಲಾ, ಪ್ರಾಣ ಪ್ರತಿಷ್ಠಾ ಹವನ, ರುದ್ರಹೋಮ, ಸರ್ಪಹೋಮ, ಚಂಡೀ ಪಾರಾಯಣ, ನವಾಕ್ಷರೀ ಜಪ, ಸಹಸ್ರ ಕುಂಭಾಭಿಷೇಕ, ದುರ್ಗಾ ನಮಸ್ಕಾರ, ಮಂಗಳಾರತಿ, ಪ್ರಸಾದ ವಿತರಣೆ ಸಾಂಗವಾಗಿ ನೆರವೇರಿ ಭಕ್ತರಲ್ಲಿ ಪುನೀತತೆ ಉಂಟಾಯಿತು.