ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರುವ ಜನಪ್ರಿಯತೆ ಲಾಭವನ್ನು ಪರಿಪೂರ್ಣವಾಗಿ ಪಡೆಯಲು ಮುಂದಾಗಿರುವ ಬಿಜೆಪಿ, ‘ಮೋದಿ ಹೇ ತೋ ಮುಮ್ಕಿನ್ ಹೇ’ (ಮೋದಿ ಇದ್ದರೆ ಎಲ್ಲವೂ ಸಾಧ್ಯ) ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಲೋಕಸಭೆ ಚುನಾವಣೆ ಎದುರಿಸಲು ಮುಂದಾಗಿದೆ.
ಬಿಜೆಪಿ ಪ್ರಚಾರ ಸಮಿತಿ ಮುಖ್ಯಸ್ಥರಾಗಿರುವ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತಮ್ಮ ಬ್ಲಾಗ್‌ಪೋಸ್ಟ್‌ನಲ್ಲಿ ಈ ವಿಷಯ ತಿಳಿಸಿದ್ದಾರೆ. ದಿನವಿಡೀ ಕೆಲಸ ಮಾಡುವ ಮೂಲಕ ಮೋದಿ ಅವರು ಅವಿಶ್ರಾಂತತೆಯನ್ನು ಮೆರೆದಿದ್ದಾರೆ. ಕ್ಷಿಪ್ರವಾಗಿ ಕಲಿಯುವಂತಹ ವ್ಯಕ್ತಿಯಾಗಿರುವ ಅವರು ಸಂಕೀರ್ಣ ವಿಚಾರಗಳಲ್ಲೂ ಸ್ಪಷ್ಟತೆ ಹಾಗೂ ಬದ್ಧತೆಯೊಂದಿಗೆ ಚುರುಕಿನಿಂದ ನಿರ್ಧಾರ ಕೈಗೊಂಡಿದ್ದಾರೆ.
ಕೆಲಸಗಾರ ಎಂಬ ಅವರ ಇಮೇಜ್ ಅನ್ನು ಬಹುತೇಕ ಭಾರತೀಯರು ಗುರುತಿಸಿದ್ದಾರೆ. ನಿರ್ಧಾರ ಕೈಗೊಂಡು, ಅದನ್ನು ಜಾರಿಗೊಳಿಸುವ ಭಾರತದ ವೇಗ ಕಂಡು ವಿಶ್ವದ ಹಲವಾರು ಮಂದಿ ಬೆರಗುಗೊಂಡಿದ್ದಾರೆ. ಹೀಗಾಗಿ ಬಿಜೆಪಿ ‘ಮೋದಿ ಹೇ ತೋ ಮುಮ್ಕಿನ್ ಹೇ’ ಎಂಬ ಘೋಷಣೆಯನ್ನು ಲೋಕಸಭೆ ಚುನಾವಣೆಗೆ ಆಯ್ಕೆ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ. 2014ರ ಲೋಕಸಭೆ ಚುನಾವಣೆಯನ್ನು ಬಿಜೆಪಿ ‘ಅಬ್ ಕೀ ಬಾರ್ ಮೋದಿ ಸರ್ಕಾರ್’ ಎಂಬ ಘೋಷಣೆಯೊಂದಿಗೆ ಎದುರಿಸಿ, ವಿಜಯಶಾಲಿಯಾಗಿತ್ತು.