ಕುಮಟಾ: ಇಲ್ಲಿಯ ದೇವರ ಹಕ್ಕಲಿನಲ್ಲಿಯ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ನಡೆಯುತ್ತಿರುವ ಅಮೃತ ಮಹೋತ್ಸವದ ಐದನೆಯ ದಿನ ಎಡನೀರು ಮಠದ ಪ.ಪೂ.ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರು ಸುಸ್ರಾವ್ಯ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಅವರ ನೇತೃತ್ವದ ವಾದ್ಯವೃಂದ ತಂಡದವರ ಕೈಚಳಕ, ಪಾಂಡಿತ್ಯ, ನೈಪುಣ್ಯತೆಗೆ ಬೆರಗಾದ ಭಕ್ತಸಮೂಹ ಭಕ್ತಿರಸದಲ್ಲಿ ತೇಲಿ ಸಂಭ್ರಮಿಸಿದರು. ಗೀತೆಯ ಸವಿ ವಸುಧೆ ಸವಿಯುವಂತಾಯಿತು.

ಸ್ವಾಮೀಜಿಗಳು ದೇವಿಯ ಹಾಗೂ ತಮ್ಮ ಇಷ್ಟದೇವ ಶ್ರೀ ಗೋಪಾಲಕೃಷ್ಣ ದೇವರ ಸ್ವರಚಿತ ಭಕ್ತಿ ಭಾವಗೀತೆಗಳನ್ನು, ದಾಸರ ಪದಗಳನ್ನೂ ತನ್ಮಯತೆಯಿಂದ ಹಾಡಿದರು. ಎನ್.ಎಸ್.ಪ್ರಸಾದ್ ಮೆಂಡೋಲಿನ್, ಕೃಷ್ಣ ಉಡುಪ ಕೀಬೋರ್ಡ, ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ ಮೃದಂಗ ಹಾಗೂ ವಿನೋದ ಶ್ಯಾಂ ತಬಲಾದಲ್ಲಿ ತಮ್ಮ ಪ್ರಾವಿಣ್ಯತೆ ಹಾಗೂ ಪ್ರಬುದ್ಧತೆ ಮೆರೆದರು. ಬೆಂಗಳೂರಿನಿಂದ ಆಗಮಿಸಿದ ಭರತನಾಟ್ಯ ಕಲಾವಿದೆ ಎಲ್.ಕೆ.ವಾಸವಿ ನೃತ್ಯ ವೈಭವದಲ್ಲಿ ಮಿಂಚಿ ಸೈ ಎನಿಸಿಕೊಂಡಳು.

RELATED ARTICLES  ಚಂದ್ರ ಗ್ರಹಣದ ಹಿನ್ನೆಲೆ ಗೋಕರ್ಣಕ್ಕೆ‌ ಹರಿದುಬಂದ ಜನ ಸಾಗರ: ಪೂಜೆ‌ ಸಲ್ಲಿಸಿದ ಅರಣ್ಯ ಸಚಿವ


ಪ್ರಾರಂಭದಲ್ಲಿ ಪುಣೆಯ ಎಸ್.ಕೆ.ನಾಯಕ ಶ್ರೀಗಳಿಗೆ ಮಾಲಾರ್ಪಣೆಗೈದರು. ಆಡಳಿತ ಮಂಡಳಿಯ ಪರವಾಗಿ ಮೊಕ್ತೇಸರ ಕೃಷ್ಣ ಬಾಬಾ ಪೈ, ಎಂ.ಬಿ.ಪೈ, ಅರ್ಚಕರು, ಪುರೋಹಿತರು, ಕಾರ್ಮಿಕ ಇಲಾಖೆಯ ಉಪ ಆಯುಕ್ತರಾದ ಶ್ರೀಕಂಠಬಾಬು, ವಿದ್ವಾಂಸ ಪಂಜ ಭಾಸ್ಕರ ಭಟ್ಟ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕರಾದ ಮಂಜುನಾಥ ನಾಯ್ಕ, ಈಶ್ವರ ಭಟ್ಟ, ಜಯದೇವ ಬಳಗಂಡಿ, ಎನ್.ಆರ್.ಗಜು, ಅರುಣ ಮಣಕೀಕರ, ಕಿರಣ ಪ್ರಭು ನಿರ್ವಹಣೆ, ಪರಿಚಯ, ನಿರೂಪಣೆ, ಪ್ರಕಟಣೆ ಕಾರ್ಯದಲ್ಲಿ ನೆರವಾದರು.

RELATED ARTICLES  ಯುವಾ ಬ್ರಿಗೇಡ್ ನಿಂದ ಕುಮಟಾದಲ್ಲಿ ಗುರು ವಂದನ