ಕುಮಟಾ : ಬಹು ನಿರೀಕ್ಷೆ ಮೂಡಿಸಿರುವ ವಿನಾಯಕ ಬ್ರಹ್ಮೂರು ನಿರ್ದೇಶನದ ಮತ್ತೊಂದು ಸೆಮಿಚಿತ್ರ ’ಆಚೆ’ ಚಿತ್ರೀಕರಣವನ್ನ ಪೂರೈಸಿದೆ. ರಂಗಭೂಮಿ ಸ್ಟಾರ್ ಕಲಾವಿದರಾದ ದಯಾನಂದ ಬಿಳಗಿ ಹಾಗೂ ಹರ್ಷ ಹಿರಿಯೂರು ಚಿತ್ರದ ನಾಯಕರಾಗಿ ಕಾಣಿಸಿಕೊಂಡಿದ್ದು ಕುಮಟಾದಲ್ಲಿ ಸಂಪೂರ್ಣ ಚಿತ್ರೀಕರಣ ಕಂಡಿದೆ. ಮಂಗಳವಾರದಂದು ಡಾ. ಅರವಿಂದ ಕರ್ಕಿಕೊಡಿ ಹಾಗೂ ಶ್ರೀಕೃಷ್ಣ ಅಬ್ಬೆಮನೆ ಅವರಿಂದ ಮುಹೂರ್ತ ಕಂಡಿದ್ದ ಚಿತ್ರ ಕೇವಲ ಎರಡೇ ದಿನದಲ್ಲಿ ಚಿತ್ರೀಕರಣವನ್ನ ಮುಗಿಸಿದೆ. ಎರಡು ದಿನಗಳ ಕಾಲ ಕುಮಟಾದಲ್ಲಿ ಬೀಡು ಬಿಟ್ಟಿದ್ದ ಚಿತ್ರ ತಂಡ ಇಲ್ಲಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಿ ಇದೀಗ ಪ್ರೊಡಕ್ಷನ್ ಕೆಲಸದತ್ತ ಹೆಜ್ಜೆ ಹಾಕಿದೆ.
’ಜೇವರ್ಗಿ’ ದೋಸ್ತರ ಜುಗಲ್‌ಬಂದಿ! :
ದಶಕಗಳಿಂದ ರಂಗಭೂಮಿಯಲ್ಲಿ ನಟಿಸಿ ಕುಂಟಕೋಣ ಮೂಕ ಜಾಣ ಎಂಬ ದಾಖಲೆಯ ನಾಟಕದಲ್ಲಿ ಕಾಣಿಸಿಕೊಂಡು ರಾಜ್ಯಾದ್ಯಂತ ಖ್ಯಾತಿ ಗಳಿಸಿರುವ ದಯಾನಂದ ಬಿಳಗಿ ಹಾಗೂ ಹರ್ಷ ಹಿರಿಯೂರು ಅವರ ಅಭಿನಯದ ಸೊಗಸನ್ನು ಈ ಚಿತ್ರದಲ್ಲಿಯೂ ಕಾಣಬಹುದಾಗಿದೆ. ಎರಡು ಶೇಡ್‌ನ ಕಥೆಯನ್ನು ಹೊಂದಿರುವ ನಾಯಕನ ಪಾತ್ರಕ್ಕೆ ತಮ್ಮ ಅನುಭವವನ್ನು ಧಾರೆ ಎಳೆದಿದ್ದಾರೆ ದಯಾನಂದ ಬಿಳಗಿ. ಇವರಿಬ್ಬರ ಕಾಂಬಿನೇಶನ್ ’ಆಚೆ’ಯಲ್ಲಿಯೂ ಅಭಿಮಾನಿಗಳನ್ನ ರಂಜಿಸುವುದರಲ್ಲಿ ಎರಡು ಮಾತಿಲ್ಲ.ಇನ್ನು ಚಿತ್ರದಲ್ಲಿ ಮುಂಬೈ ಬೆಡಗಿ ತೇಜು ನಾಯ್ಕ ನಾಯಕಿಯಾಗಿ ಕಾಣಿಸಿಕೊಂಡಿದ್ದು ಜಯದೇವ ಬಳಗಂಡಿ, ಲಕ್ಷ್ಮಣ ಪಟಗಾರ, ನಿತೇಶ್ ಮಹಾಲೆ, ಅನು ಮಡಿವಾಳ, ಸ್ನೇಹಜೀವಿ ಕಡ್ಲೆ, ಹರ್ಷಿತ್ ಅಂಬಿಗ್, ದಿನೇಶ ಗಾಂವ್ಕರ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಸುನೀಲ್ ಹೆಗಡೆ ತಟ್ಟೀಸರ ಅವರ ಸಿನಿಮಾಟೋಗ್ರಫಿ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಎನಿಸಲಿದ್ದು ಕುಮಟಾದ ಸುಂದರ ತಾಣಗಳನ್ನ ಡ್ರೋಣ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಹೆಗಡೆ, ಹೊಲನಗದ್ದೆ, ಮುರೂರು ಕ್ರಾಸ್, ಗಿಬ್‌ಸರ್ಕಲ್, ಅಶ್ವಿನಿಧಾಮ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆದಿದೆ. ನೋಬಿನ್ ಹೆಗಡೆ, ರೇಣುಕಾ ಹೆಗಡೆ, ಕೃಷ್ಣ ಅಬ್ಬೆಮನೆ, ಪೂರ್ಣಿಮಾ ಕೆಎನ್, ಕಲ್ಪನಾ ಪಟಗಾರ, ನಾರಾಯಣ ಹೆಗಡೆ ಚಿತ್ರೀಕರಣದಲ್ಲಿ ಸಹಕಾರ ನೀಡಿದರು. ಪೋಸ್ಟರ್ ಡಿಸೈನಿಂಗ್ ಜವಾಬ್ದಾರಿಯನ್ನು ಶರತ್ ಹೆಗಡೆ ನಿಭಾಯಿಸಿದ್ದು ಪವನಕುಮಾರ್ ಹೆಗಡೆಯವರ ಸ್ಥಿರಚಿತ್ರಣ ಕೂಡ ಗಮನ ಸೆಳೆದಿದೆ.
ಗಂಟೆಗಳ ಕಾಲ ಬಿಸಿಲಲ್ಲಿ ಮಲಗಿದ ಬಿಳಗಿಮಂಗಳವಾರದಂದು ಗಿಬ್‌ಸರ್ಕಲ್ ಬಳಿ ಚಿತ್ರದ ಪ್ರಮುಖ ದೃಶ್ಯವನ್ನ ಚಿತ್ರೀಕರಿಸಲಾಗಿತ್ತು. ಬೈಕ್ ಅಪಘಾತದ ಆ ಸನ್ನಿವೇಶದಲ್ಲಿ ಕೆಂಡಕಾರುತ್ತಿದ್ದ ಟಾರ್ ರಸ್ತೆಯ ಮೇಲೆ ಗಂಟೆಗಳ ಕಾಲ ದಯಾನಂದ ಬಿಳಗಿ ಮಲಗಬೇಕಾಗಿತ್ತು. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಇದ್ಯಾವುದಕ್ಕೂ ಒಲ್ಲೆ ಎನ್ನದೇ ಅಭಿನಯಿಸಿದರು. ಚಿತ್ರೀಕರಣದ ವೇಳೆ ನೂರಕ್ಕೂ ಹೆಚ್ಚು ಮಂದಿ ಚಿತ್ರೀಕರಣವನ್ನು ವೀಕ್ಷಿಸಿದರು. ಈ ದೃಶ್ಯ ಮುಗಿಯುತ್ತಿದ್ದಂತೆ ತಮ್ಮ ನೆಚ್ಚಿನ ಕಲಾವಿದನ ಬಳಿ ಹೋಗಿ ಕೈ ಕುಲುಕುವ ಮೂಲಕ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು.
ಆಚೆ ಚಿತ್ರದಲ್ಲಿ ನಟಿಸಿರುವುದು ಹೊಸ ಅನುಭವ ತಂದಿದೆ. ಕುಮಟಾದೆಡೆಗೆ ಮತ್ತೆ ಬಂದು ಸ್ನೇಹಿತರನ್ನೆಲ್ಲಾ ಭೇಟಿಯಾಗಿದ್ದು, ಹಾಗೂ ಚಿತ್ರೀಕರಣದುದ್ದಕ್ಕೂ ಇಲ್ಲಿನ ಜನತೆ ಸಹಕಾರ ನೀಡಿದ್ದು ಸಂತಸದ ವಿಚಾರ. ಚಿತ್ರ ಹೇಗೆ ಮೂಡಿ ಬರಬಹುದೆಂಬ ಕುತೂಹಲ ನನಗೂ ಇದೆ. – ದಯಾನಂದ ಬಿಳಗಿ, ಚಿತ್ರದ ನಟ