ಕುಮಟಾ: ಇಲ್ಲಿಯ ಸದ್ಭಕ್ತ ಜನರಾದ ನೀವು ನನ್ನ ಮೇಲೆ ಹೊಂದಿರುವ ಅಭಿಮಾನವೇ ದೊಡ್ಡದು. ಅದಕ್ಕಿಂತ ನೀವು ತೋರುವ ಪ್ರೀತಿ ಅತ್ಯಂತ ದೊಡ್ಡದು. ಆ ಭಕ್ತಿಪೂರ್ವಕ ಪ್ರೀತಿಯ ಸೆಳೆತವೇ ನನ್ನನ್ನು ಭಾವ ಪರವಶನನ್ನಾಗಿ ಮಾಡಿದೆ. ಇಲ್ಲಿಗೆ ಪ್ರತಿ ಸಲ ಬಂದು ಪಾಲ್ಗೊಂಡು ಬೀಳ್ಕೊಡುವಾಗಿನ ತಮ್ಮ ಅಶ್ರುಧಾರೆ ಮೂಕನನ್ನಾಗಿ ಮಾಡುತ್ತದೆ ಎಂದು ಎಡನೀರು ಮಠದ ಶ್ರೀಗಳಾದ ಕೇಶವಾನಂದ ಭಾರತೀ ಸ್ವಾಮೀಜಿಗಳು ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಜರುಗುತ್ತಿರುವ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಡೆದ ಗುರುವಂದನಾ ಸಮಾರಂಭದಲ್ಲಿ ಆಡಳಿತ ಮಂಡಳಿ ಮತ್ತು ಭಜಕ ಭಕ್ತಜನರಿಂದ ಗುರುವಂದನೆ ಸ್ವೀಕರಿಸಿ ಆರ್ಶೀವಚನ ನೀಡುತ್ತಿದ್ದರು.


ಸ್ವಾಮೀಜಿಯವರನ್ನು ದೇವಸ್ಥಾನದ ವಹಿವಾಟ ಮೊಕ್ತೇಸರ ಕೃಷ್ಣ ಬಾಬಾ ಪೈ ಪ್ರೀತಿಪೂರ್ವಕವಾಗಿ ಸನ್ಮಾನಿಸಿದರು. ವಿದ್ವಾಂಸ ಪಂಜೆ ಭಾಸ್ಕರ ಭಟ್ಟ ಗುರುವಂದನಾ ನುಡಿಗಳನ್ನಾಡುತ್ತಾ ಸನ್ಮಾನಕ್ಕೆ ಯೋಗ್ಯರಾದವರನ್ನು ಸನ್ಮಾನಿಸದಿದ್ದರೆ ಅಪರಾಧವಾಗುತ್ತದೆ. ಎಲ್ಲಿ ಸಜ್ಜನರಿಗೆ ಯೋಗ್ಯ ಗೌರವ ಲಭಿಸುತ್ತದೋ ಅಲ್ಲಿ ಸುಭಿಕ್ಷೆ ನೆಲೆಸುತ್ತದೆ. ದೇವಿಯ ನೆಲೆ ಸುಭಿಕ್ಷೆಯ ತಾಣವಾಗಿದೆ ಎಂದರು. ಸಾಮಾಜಿಕ ಕಾರ್ಯಕರ್ತ ಎಂ.ಎಂ.ಪ್ರಭು ಮಾತನಾಡುತ್ತಾ ಬದುಕಿನಲ್ಲಿ ಗುರುವಿನ ಅನುಗ್ರಹವೊಂದಿದ್ದರೆ ಜೀವನದಲ್ಲಿ ಎಲ್ಲವೂ ಸಾಧ್ಯವೆಂದು ತಿಳಿಸುತ್ತಾ ಗುರುವಿನ ಮಹತ್ವವನ್ನು ಸಾರಿದರು. ತ್ರಿವಿಕ್ರಮ ಪೈ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಿ.ಡಾ.ಬಿ.ಎಂ.ಪೈ ಅವರ ಕಾಲದಿಂದಲೂ ದೇವಸ್ಥಾನದ ಸಕಲ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ಪ್ರಧಾನ ಪುರೋಹಿತ ವಿದ್ವಾನ್ ನಾರಾಯಣ ಉಮಾಶಿವ ಉಪಾಧ್ಯ, ಗೋಕರ್ಣ ಅವರು ಪೈ ಕುಟುಂಬದ ಸಹೃದಯತೆಯನ್ನು, ಸಮಾಜಮುಖೀ ಗುಣವನ್ನು ಪ್ರಶಂಸಿಸಿದರು.

RELATED ARTICLES  ಭಟ್ಕಳದಲ್ಲಿ ಗಾಂಜಾ ಮಾರಾಟ..! ನಾಲ್ವರು ಅಂದರ್..!


ಕುಂಬೇಶ್ವರ ದೇವಸ್ಥಾನದ ಅರ್ಚಕ ದತ್ತಾತ್ರಯ ಭಟ್ಟ ಶಂಖನಾದಗೈದರು. ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ, ದೇವಿ ಸ್ತುತಿ ಮತ್ತು ಸ್ವಾಗತ ಗೀತೆ ನಡೆಸಿಕೊಟ್ಟರು. ಪುಣೆಯ ಉದ್ಯಮಿ ಎಸ್.ಕೆ.ನಾಯಕ, ಕಾರ್ಮಿಕ ಇಲಾಖೆಯ ಉಪ ಕಾರ್ಯದರ್ಶಿ, ಶ್ರೀಕಂಠಬಾಬು ಐಆರ್‍ಬಿ ಹಿರಿಯ ಅಧಿಕಾರಿ ವಿಶ್ವರೂಪ ಕಿರಣ, ಅರ್ಚಕರಾದ ಅರುಣ ಗುನಗಾ, ರಾಜು ಗುನಗಾ, ಪ್ರಕಾಶ ಗುನಗಾ, ಪ್ರಶಾಂತ ಗುನಗಾ ಮೊದಲಾದವರು ಇದ್ದರು.


ಎಲ್ಲ ಆಸ್ತಿಕ ಜನರು, ಭಜಕವೃಂದದವರು ಸೇರಿ ಕೃಷ್ಣಬಾಬಾ ಪೈ ದಂಪತಿಗಳನ್ನು ಈ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ಸನ್ಮಾನಿಸಿ ಸಂಭ್ರಮಾಚರಣೆಗೈದರು. ದೇವಳದ ಅಭಿವೃದ್ಧಿಯಲ್ಲಿ ಕಳೆದ 75 ವರ್ಷಗಳಿಂದ ಒಂದಲ್ಲ ಒಂದು ರೀತಿಯಲ್ಲಿ ನೆರವಾದ ಎಲ್ಲರನ್ನೂ ಗೌರವಿಸಿದ್ದು ವಿಶಿಷ್ಠ ಸಂಪ್ರದಾಯಕ್ಕೆ ನಾಂದಿಯಾಯಿತು. ಜಯದೇವ ಬಳಗಂಡಿ ಸ್ವಾಮೀಜಿಯವರ ಮತ್ತು ಎನ್.ಆರ್.ಗಜು ಕೃಷ್ಣ ಪೈ ಅವರ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕರಾದ ಮಂಜುನಾಥ ನಾಯ್ಕ, ಈಶ್ವರ ಭಟ್ಟ, ಅರುಣ ಮಣಕೀಕರ ನಿರೂಪಿಸಿದರು. ಕಿರಣ ಪ್ರಭು ನಿರ್ವಹಣೆಯಲ್ಲಿ ಪಾಲ್ಗೊಂಡರು. ಕೊನೆಯಲ್ಲಿ ಎಲ್ಲರ ಉಪಕಾರವನ್ನು ಆಡಳಿತ ಮಂಡಳಿಯ ಪರವಾಗಿ ಎಂ.ಬಿ.ಪೈ ಸ್ಮರಿಸಿದರು.

RELATED ARTICLES  ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಶಾಸಕ


ಖ್ಯಾತ ಕಲಾವಿದ ವಿದ್ವಾನ್ ಅನಂತಕೃಷ್ಣ ಶರ್ಮಾ (ಶಿವು) ಬೆಂಗಳೂರು ಇವರ ನಿರ್ದೇಶನದಲ್ಲಿ ಯುವ ವಾದ್ಯ ಕಲಾವಿದರಿಂದ ಕರ್ಣರಂಜಿತ ವಿಶಿಷ್ಠ ತಾಳ-ವಾದ್ಯಗಳ ಪ್ರಸ್ತುತಿ ಎಲ್ಲರ ಮನ ಸೆಳೆಯಿತು. ವಿದ್ವಾನ್ ದೀಪಕ ಹೆಬ್ಬಾರ ಕೊಳಲು, ಆದಿತ್ಯ ಎಂ.ಪಿ.-ಪಿಟೀಲು, ನಾಗೇಂದ್ರ ಪ್ರಸಾದ-ಡೋಲು, ಸುನಾದ ಆನೂರು-ಖಂಜರಿ, ಸೋಮಶೇಖರ ಜೋಯಿಸ್-ಕೊನ್ನಕೋಲು, ತಿರುಮಲೆ ಗೋಪಿ ಶ್ರವಣ-ಡ್ರಮ್ಸ್, ಪ್ರಣವ್ ದತ್ತ-ಚಂಡೆ, ಕಹೋನ್, ಬೈಂಗೂಸ್, ಬೇಸ್ ಟೇಪ್, ಚಿದಾನಂದ-ಪೋರ್ಚಿಂಗ್, ಸುದತ್ತಾ-ತಬಲಾ, ವಿನೋದ್ ಶ್ಯಾಮ್ ಆನೂರು-ತಬಲಾ, ಡೋಲಕ್, ಡಿಕ್ಕಿ ತರಂಗ್, ಶಿವು ಅವರ ಮೃಂದಗವೇ ಮುಂತಾದ ಸಾಧಕರಿಂದ ವಾದ್ಯವೃಂದಗಳು ಮೇಳೈಸಿ ಮೊಳಗಿದವು. ಕಿವಿಗಡಚಿಕ್ಕುವ ಸುಮಧುರ ಕರತಾಡನಗಳಿಂದ ಮೆಚ್ಚುಗೆಗೆ ಪಾತ್ರವಾಯಿತು.