ಎಂ.ಎಸ್.ಶೋಭಿತ್ ಮೂಡ್ಕಣ
ಶಿರಸಿ: ದಿ. 16 ಶನಿವಾರದಂದು ಶಿರಸಿಯ ಮಹಾದೇವ ಭಟ್ಟ ಕೂರ್ಸೆ ಕಿವುಡುಮಕ್ಕಳ ಶಾಲೆಯಲ್ಲಿ ಪತ್ರಕರ್ತ, ಬರಹಗಾರ ವಿನಾಯಕ ಜಿ ಹೆಗಡೆಯವರ ‘ಬಾಳ್ನೋಟ’ ಕೃತಿ ಅನಾವರಣಗೊಂಡಿತು. ಗಣ್ಯರು ಮತ್ತು ದಿವ್ಯಾಂಗ ಮಕ್ಕಳೊಂದಿಗೆ ನಡೆದ ಪುಸ್ತಕ ಅನಾವರಣ ಸಾಹಿತ್ಯಲೋಕದಲ್ಲಿ ಹೊಸ ಅರಿವನ್ನು, ಹರಿವನ್ನೇ ಸೃಷ್ಟಿಸಿತು. ಬಾಳ್ನೋಟ ಕೃತಿಯ ಮಾರಾಟದಿಂದ ಬಂದ ಹಣವನ್ನು ಉತ್ತರಕನ್ನಡ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ನಡೆಸುತ್ತಿರುವ ಮಹಾದೇವ ಭಟ್ಟ ಕೂರ್ಸೆ ಕಿವುಡುಮಕ್ಕಳ ಶಾಲೆಗೆ ಹಸ್ತಾಂತರಿಸಲಾಯಿತು.
ಐವತ್ತಕ್ಕೂ ಹೆಚ್ಚು ಓದುಗರು ದಿವ್ಯಾಂಗರಿಗೆ ನೆರವಾಗುವದಕ್ಕೋಸ್ಕರ ಕೃತಿಯನ್ನು ಕೊಂಡು ಓದಿದ್ದು ವಿಶೇಷವೆನಿಸಿತು. ಓದುಗರಿಂದ ಸಂಗ್ರಹಿಸಿದ 5000 ರೂಪಾಯಿಯನ್ನು ಚೆಕ್ ಮೂಲಕ ಹೊನ್ನಾವರದ ನಾಗರಿಕ ವಾರಪತ್ರಿಕೆಯ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಸಂಸ್ಥೆಯ ಅಧ್ಯಕ್ಷರಾದ ನಾರಾಯಣ ಹೆಗಡೆ ಗಡಿಕೈ ಹಾಗೂ ಕಾರ್ಯದರ್ಶಿಗಳಾದ ಎಂ.ಎಂ.ಭಟ್ಟ ಕಾರೇಕೊಪ್ಪ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡುತ್ತ ಈ ಮಕ್ಕಳು ಅವರ ಬದುಕು ಅವರನ್ನು ಕೂಡಿ ಆಡಿ ಬೆಳೆಸುತ್ತಿರುವ ಪುಣ್ಯಜೀವಿಗಳ ಜೊತೆ ಇರುವುದೇ ಒಂದು ಸಂಭ್ರಮ. ವಿನಾಯಕ ಹೆಗಡೆ ಅವರಂತಹ ಬರಹಗಾರ, ಲೇಖಕ ಮಕ್ಕಳ ಜೀವಕ್ಕಾಗಿ ತುಡಿಯುವ ಲೇಖಕರ ಮನಸ್ಸು ಹಾಗೂ ಅವರು ನಡೆಯುತ್ತಿರುವ ದಾರಿಯೇ ಒಂದು ದೀಪದ ದಾರಿ. ಪ್ರತಿ ಜೀವಿಯೂ ಪುಣ್ಯ ಜೀವಿ ಆಗಬಹುದು. ತನ್ನ ಆತ್ಮಗೌರವ ಹಾಗೂ ಇನ್ನೊಬ್ಬರ ಆತ್ಮಗೌರವ ಗೌರವಿಸುತ್ತ ಬದುಕು ರೂಪಿಸಿಕೊಳ್ಳಬಹುದು. ಇಲ್ಲಿ ಕಿವುಡರಿದ್ದಾರೆ ಮೂಗರಿದ್ದಾರೆ ಆದರೆ ಅವರ ಕಣ್ಣುಗಳಲ್ಲಿ, ದೇಹದಲ್ಲಿ ಪ್ರತಿ ಅಂಗದಲ್ಲಿ ಮಾತುಗಳಿವೆ, ಮುಗಿಯದ ಕನಸುಗಳಿವೆ. ಇವರೊಂದಿಗಿನ ಜೀವನ ಧನ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡುತ್ತ ವಿದ್ವಾನ್ ಎಂ.ವಿ.ಶರ್ಮಾ ತದ್ದಲಸೆ ದಿವ್ಯಾಂಗರಲ್ಲಿ ಏನೋ ಒಂದು ಅವ್ಯಕ್ತ ಶಕ್ತಿ ಇರುತ್ತದೆ, ಸಂಪಾದನೆ ಮಾಡಿದ್ದನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು, ಸದ್ವಿನಿಯೋಗ ಸಾರ್ಥಕವಾದಾಗ ಮಾತ್ರ ಧನ್ಯತೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಕೃತಿಯ ಆಶಯ ಪೂರ್ಣವಾಗಿದೆ ಎಂದರು. ಇದೇ ಸಂದರ್ಭದಲ್ಲಿ ಬಾಳ್ನೋಟ ಕೃತಿಯ ಸದಾಶಯದಿಂದ ಪ್ರೇರಿತ ಬೆಂಗಳೂರಿನ ಅಕ್ಷಯ ಪ್ರಕಾಶನದ ಮಾಲಕರಾದ ಸೀತಾರಾಮ ಹೆಗಡೆಯವರು ನೀಡಿದ 5000 ರೂಪಾಯಿ ಚೆಕ್ ನ್ನು ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ನಾರಾಯಣ ಹೆಗಡೆ ಗಡಿಕೈ ಅವರಿಗೆ ಎಂ.ವಿ.ಶರ್ಮಾ ಹಸ್ತಾಂತರಿಸಿದರು.
ಜಿ.ಎನ್.ಹೆಗಡೆ ಆಡಳ್ಳಿ ನಿವೃತ್ತ ಕನ್ನಡ ಉಪನ್ಯಾಸಕರು ಮಾತನಾಡುತ್ತ ತಮ್ಮ ಪುತ್ರನ ಈ ಕೃತಿಯಿಂದ ಹೆಮ್ಮೆ ಪಡುವಂತಾಗಿದೆ. ಇದೊಂದು ಜೀವನದ ಸಂತಸದ ಸಮಯ. ಒಂದು ಕೃತಿ ಮಾಡಿದ ನಿರಪೇಕ್ಷ ಸಹಾಯವನ್ನು ಸ್ಮರಿಸಿದರು. ಈ ಕಾರ್ಯ ಮಾದರಿಯಾಗಲಿ ಎಂದು ಆಶಿಸಿದರು.
ಸಂಸ್ಥೆಯ ಅಧ್ಯಕ್ಷ ನಾರಾಯಣ ಹೆಗಡೆ ಗಡಿಕೈ ಮಾತನಾಡುತ್ತ ಸಂಸ್ಥೆ ಪ್ರಾರಂಭವಾಗಿ ಮೂವತ್ನಾಲ್ಕು ವರ್ಷ ಸಂದಿದೆ ಇವತ್ತು ಸಂಸ್ಥೆ ಉತ್ತುಂಗದಲ್ಲಿ ಇರುವುದಕ್ಕೆ ಹಿಂದಿನ ಎಲ್ಲ ಗಣ್ಯರ ಶ್ರಮವನ್ನು ಸ್ಮರಿಸಿದರು. ನಮ್ಮಲ್ಲಿ ಹಲವು ಪ್ರತಿಭೆಗಳಿವೆ. ಅವರ ಉನ್ನತಿಯಿಂದ ಸಂತೋಷವಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಎಂ.ಎಂ.ಭಟ್ಟರು ಸಂಸ್ಥೆಯ ಮಕ್ಕಳೊಂದಿಗೆ ಜೀವನದ ಧನ್ಯತೆ ಕಾಣುತ್ತಿದ್ದೇನೆ. ನಮ್ಮ ಶಿಕ್ಷಕರು ಮಕ್ಕಳೊಂದಿಗೆ ಪ್ರೀತಿಯನ್ನು ಹಂಚುತ್ತಿದ್ದಾರೆ ನಾವೆಲ್ಲ ಇಂದು ಮಾಡುತ್ತಿರುವುದು ಕೂಡ ಅದನ್ನೇ. ವಿನಾಯಕ ಹೆಗಡೆಯವರಂತಹ ಯುವ ಮನಸ್ಸುಗಳು ಸಾವಿರಾರು ಬೆಳೆಯಲಿ. ಅವರ ಚೊಚ್ಚಲ ಪುಸ್ತಕ ಬಿಡುಗಡೆ ನಮ್ಮೊಂದಿಗೆ ಮಾಡುತ್ತಿರುವುದು ಖುಷಿ ತಂದಿದೆ ಎಂದರು.
ಮಹಾದೇವ ಭಟ್ಟ ಕೂರ್ಸೆ ಕಿವುಡು ಮಕ್ಕಳ ಶಾಲೆಯ ಮುಖ್ಯಾಧ್ಯಾಪಕಿ ಪ್ರೇಮಲತಾ ನಾಯ್ಕ ಮಾತನಾಡಿದರು. ಬಾಳ್ನೋಟ ಕೃತಿಯ ಪರವಾಗಿ ಒಟ್ಟೂ ಹತ್ತು ಸಾವಿರ ರೂಪಾಯಿಗಳನ್ನು ಸಂಸ್ಥೆಗೆ ಹಸ್ತಾಂತರಿಸಲಾಯಿತು. ಲೇಖಕರ ಪರವಾಗಿ ಅವರ ತಂದೆ ಜಿ.ಎನ್.ಹೆಗಡೆ ಆಡಳ್ಳಿ ಮಕ್ಕಳಿಗೆ ಸಿಹಿ, ನೋಟಬುಕ್ ಮತ್ತು ಪೆನ್ ಹಾಗೂ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ನಿರ್ವಹಣಾಧಿಕಾರಿಗಳಾದ ಗುರುಪ್ರಸಾದ ಹೆಗಡೆ ಸಾಲ್ಕಣ ಪರವಾಗಿ ಪೆನ್ಸಿಲ್ ಮತ್ತು ಶಾರ್ಪನರ ವಿತರಿಸಲಾಯಿತು.
ಓದುಗರಿಂದ ಬಂದ ಸಂದೇಶದೊಂದಿಗೆ ಓದುಗರ ಹೆಸರನ್ನು ತನುಜಾ ಹೆಗಡೆ ವಾಚಿಸಿದರು. ಪುಸ್ತಕ ಕೊಂಡು ನೆರವಾದವರ ಯಾದಿಯನ್ನು ಇದೇ ಸಂದರ್ಭದಲ್ಲಿ ಸಂಸ್ಥೆಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಕವಯಿತ್ರಿ ರಾಜಲಕ್ಷ್ಮೀ ಭಟ್ಟ ಕವನ ವಾಚಿಸಿದರು. ಲೆಖಕ ವಿನಾಯಕ ಹೆಗಡೆ ಸ್ವಾಗತಿಸಿದರು. ಕುಮಾರಿ ಜಯಲಕ್ಷ್ಮೀ ಹೆಗಡೆ ಮಕ್ಕಳತಾಯ್ಮನೆ ಕಾರ್ಯಕ್ರಮ ನಿರ್ವಹಿಸಿದರು. ಅರುಣ ಭಟ್ಟ ಬರೂರು ವಂದಿಸಿದರು. ಸಂಸ್ಥೆಯ ಸಿಬ್ಬಂದಿಗಳು ತುಂಬು ಹೃದಯದಿಂದ ಸಹಕರಿಸಿದರು.