ಹೊನ್ನಾವರ: ವಿಶ್ವದಲ್ಲೇ ಅತ್ಯಂತ ವಿಶಿಷ್ಟ ಗೋ ತಳಿ ಎನಿಸಿದ ಮಲೆನಾಡು ಗಿಡ್ಡದಂಥ ತಳಿಗಳನ್ನು ಉಳಿಸಿ ಬೆಳೆಸುವುದು ಅಗತ್ಯ. ಇದು ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಅತಿದೊಡ್ಡ ಕೊಡುಗೆ ಎಂದು ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ (ಎನ್‍ಡಿಆರ್‍ಐ)ಯ ದಕ್ಷಿಣ ಭಾರತ ಕೇಂದ್ರದ ನಿರ್ದೇಶಕ ಡಾ.ಕೆ.ಪಿ.ರಮೇಶ್ ಹೇಳಿದರು.ಹೊನ್ನಾವರ ಹವ್ಯಕದಲ್ಲಿ ಭಾನುವಾರ ಹಮ್ಮಿಕೊಂಡ ವಿಶಿಷ್ಟ ಮಲೆನಾಡು ಗಿಡ್ಡ ಹಬ್ಬದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, “ಮಲೆನಾಡು ಗಿಡ್ಡ ತಳಿಯ ಹಸುಗಳಲ್ಲಿ ವಿಶ್ವದಲ್ಲಿ ಯಾವ ತಳಿಯ ಹಸುಗಳ ಹಾಲಿನಲ್ಲೂ ಇಲ್ಲದಷ್ಟು ಲ್ಯಾಕ್ಟೋಫಿರಿನ್ ಅಂಶ ಇದೆ. ಪ್ರತಿ ಗ್ರಾಂ ಹಾಲಿನಲ್ಲಿ 300 ಮಿಲಿಗ್ರಾಂವರೆಗೂ ಈ ಅಂಶ ಇದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವೂ ಈ ಹಸುವಿನ ಹಾಲಿನಲ್ಲಿದೆ” ಎಂದು ವಿವರಿಸಿದರು.”ಗೋ ಸಾಕಾಣಿಕೆಯಲ್ಲಿ ತಕ್ಷಣದ ಲಾಭವನ್ನಷ್ಟೇ ನೋಡದೇ, ಜೀವಿತಾವಧಿಯ ಉತ್ಪಾದಕತೆ ಬಗ್ಗೆ ಗಮನ ಹರಿಸಬೇಕು, ಉಳಿದೆಲ್ಲ ತಳಿಗಳಿಗೆ ಹೋಲಿಸಿದರೆ ಜೀವಿತಾವಧಿ ಉತ್ಪಾದಕೆಯೂ ಈ ತಳಿಗಳಲ್ಲಿ ಅತ್ಯಧಿಕ. ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ” ಎಂದು ಹೇಳಿದರು.ಮಿಶ್ರ ತಳಿಗಳು ಈ ದೇಶದ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟ. ಆದರೆ ಆಯಾ ಪ್ರದೇಶದಲ್ಲೇ ಶತಮಾನಗಳಿಂದ ಸಾಕಾಣಿಕೆ ಮಾಡಿಕೊಂಡು ಬಂದ ಸ್ಥಳೀಯ ತಳಿಗಳಲ್ಲಿ ರೋಗ ನಿರೋಧಕ ಅಂಶಗಳೂ ಅಧಿಕ. ಮಲೆನಾಡು ಗಿಡ್ಡದಂಥ ತಳಿಗಳು ಯಾವ ವಾತಾವರಣಕ್ಕೂ ಹೊಂದಿಕೊಳ್ಳುವ ಸಾಮಥ್ರ್ಯ ಹೊಂದಿದ್ದು, ಜಾಗತಿಕ ತಾಪಮಾನದಂಥ ಸಮಸ್ಯೆಗೂ ಇಂಥ ತಳಿಗಳು ಪರಿಹಾರವಾಗಲಿವೆ ಎಂದು ವಿಶ್ಲೇಷಿಸಿದರು.ಭಾರತದ ಬಹಳಷ್ಟು ಕಡೆಗಳಲ್ಲಿ ಇಂದು ಹಾಲಿನ ಉತ್ಪಾದನೆ ಬೇಡಿಕೆಗಿಂತ ಅಧಿಕವಾಗಿದೆ. ಇಷ್ಟಾಗಿಯೂ ಹೈನುಗಾರಿಕೆ ಲಾಭದಾಯಕವಲ್ಲ ಎಂಬ ಸ್ಥಿತಿ ಇದೆ. ಇಂದು ನಾವು ಹಾಲಿನ ಪ್ರಮಾಣಕ್ಕಿಂತ ಹಾಲಿನ ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಎ2 ಹಾಲಿಗೆ ಬೇಡಿಕೆ ವಿಶ್ವಾದ್ಯಂತ ಹೆಚ್ಚುತ್ತಿದ್ದು, ಇಂಥ ಅವಕಾಶವನ್ನು ಬಳಸಿಕೊಂಡು, ಭಾರತದಲ್ಲಿ ಎ2 ಹಾಲಿನ ಉತ್ಪಾದನೆ ಹೆಚ್ಚಿಸಬೇಕು ಎಂದು ಸಲಹೆ ಮಾಡಿದರು.ಅತಿ ವಿಶಿಷ್ಟವಾದ ಮಲೆನಾಡು ಗಿಡ್ಡ ತಳಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಈ ತಳಿಯ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನವಾಗಿ ಭಾರತೀಯ ಹೈನು ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ಗೋ ಪರಿವಾರ- ಕರ್ನಾಟಕ, ರೋಟರಿ ಕ್ಲಬ್ ಸಹಯೋಗದಲ್ಲಿ ಈ ವಿಶಿಷ್ಟ ಹಬ್ಬ ಆಯೋಜಿಸಲಾಗಿತ್ತು.ದಿನವಿಡೀ ನಡೆದ ಹಬ್ಬದಲ್ಲಿ ವಿಚಾರ ಸಂಕಿರಣ, ಮಲೆನಾಡು ಗಿಡ್ಡ ಗೋ ಪ್ರದರ್ಶನ, ಹಾಲಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಆಹಾರ ಮೇಳ, ಉಚಿತ ಚಿಕಿತ್ಸಾ ಶಿಬಿರ, ಸ್ಪರ್ಧೆಯಂಥ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ರೈತರು ಹಲವು ವಿಷಯಗಳ ಬಗ್ಗೆ ತಜ್ಞರೊಂದಿಗೆ ಸಂವಾದ ನಡೆಸಿದರು. ಆಗಮಿಸಿದ ಎಲ್ಲರಿಗೂ ಮಲೆನಾಡು ಗಿಡ್ಡ ತಳಿಯ ಹಾಲನ್ನು ಉಚಿತವಾಗಿ ವಿತರಿಸಲಾಯಿತು.ಬೆಳಿಗ್ಗೆ ದಿನೇಶ್ ಶಹರಾ ಫೌಂಡೇಷನ್‍ನ ಮುಖ್ಯಸ್ಥ ದಿನೇಶ್ ಶಹರಾ ಗೋಪೂಜೆ ನೆರವೇರಿಸಿ ಮಲೆನಾಡು ಗಿಡ್ಡ ಹಬ್ಬಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಉಚಿತ ಚಿಕಿತ್ಸಾ ಶಿಬಿರವನ್ನೂ ಉದ್ಘಾಟಿಸಿದರು. ಫೌಂಡೇಷನ್‍ನ ಸಿಎಸ್‍ಆರ್ ವಿಭಾಗದ ಮುಖ್ಯಸ್ಥೆ ಮೀರಾ ಭಾಟಿಯಾ, ಮಹೇಶ್ ಪಟ್ವಾರಿ, ಅಜಯ್ ಮಲ್ಲಿ, ಡಾ.ಅಲ್ಕಾ ಪಟೇಲ್ ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಗೋ ಪರಿವಾರದ ಅಧ್ಯಕ್ಷ ಯೋಗೀಶ್ ರಾಯ್ಕರ್ ನೆರವೇರಿಸಿದರು. ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಸವರಾಜು, ಭಾರತೀಯ ಗೋ ಪರಿವಾರ- ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ, ರೋಟರಿ ಕ್ಲಬ್ ಅಧ್ಯಕ್ಷ ಡಾ.ರಂಗನಾಥ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು.ಮಂಜುನಾಥ್ ಸುವರ್ಣಗದ್ದೆ ಪ್ರಸ್ತಾವಿಕವಾಗಿ ಮಾತನಾಡಿದರು. ಭಾರತೀಯ ಗೋ ಪರಿವಾರದ ಸಹ ಕಾರ್ಯದರ್ಶಿ ಶಿಶಿರ್ ಹೆಗಡೆ ಸ್ವಾಗತಿಸಿದರು.ಕಾರ್ಯಾಗಾರದಲ್ಲಿ ಮಲೆನಾಡು ಗಿಡ್ಡ ತಳಿಯ ಅಭಿವೃದ್ಧಿ ಮಾರ್ಗೋಪಾಯಗಳ ಬಗ್ಗೆ ಡಾ.ಕೆ.ಪಿ.ರಮೇಶ್, ಈ ತಳಿಯ ಹಸುಗಳಲ್ಲಿನ ಸಾಮಾನ್ಯ ವಿಷಬಾಧೆಗಳ ಬಗ್ಗೆ ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಎನ್.ಬಿಶ್ರೀಧರ್, ಸಂತಾನೋತ್ಪತ್ತಿ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಸಾಗರ ಮುಖ್ಯ ಪಶುವೈದ್ಯಾಧಿಕಾರಿ ಡಾ.ಜೆ.ಆರ್.ತಿಮ್ಮಪ್ಪ, ಮಲೆನಾಡು ಗಿಡ್ಡ ಕಾಮಧೇನು ಎಂಬ ವಿಷಯದ ಬಗ್ಗೆ ಡಾ.ಕೆ.ಎಂ.ನಾಗರಾಜ್, ಪಾರಂಪರಿಕ ಚಿಕಿತ್ಸಾ ವಿಧಾನಗಳ ಬಗ್ಗೆ ಶಿರಸಿಯ ಪಶುರೋಗ ಪ್ರಯೋಗಾಲಯದ ಪ್ರಾದೇಶಿಕ ಸಂಶೋಧನಾಧಿಕಾರಿ ಡಾ.ಗಣೇಶ್ ಹೆಗಡೆ ವಿಷಯ ಮಂಡಿಸಿದರು.30 ಕ್ಕೂ ಹೆಚ್ಚು ಮಳಿಗೆಗಳಲ್ಲಿ ಇದ್ದ ವಿವಿಧ ಗವ್ಯೋತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಆಹಾರೋತ್ಸವದಲ್ಲೂ ಜನ ಉತ್ಸಾಹದಿಂದ ಪಾಲ್ಗೊಂಡರು. ವಿವಿಧ ಬಣ್ಣಗಳ, ಜಾತಿಯ 100ಕ್ಕೂ ಹೆಚ್ಚು ಮಲೆನಾಡು ಗಿಡ್ಡ ಹಸುಗಳು ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ನೋಡುಗರಿಗೆ ಅಪೂರ್ವ ಅನುಭವ ನೀಡಿತು.

RELATED ARTICLES  ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್.ಎಸ್.ಎಸ್ ನ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ.