ಹೊನ್ನಾವರ: ಭಾರತೀಯ ಗೋ ತಳಿಗಳ ಸಂರಕ್ಷಣೆಗೆ ಇಂದು ಭಾರತದಲ್ಲಿ ಧರ್ಮಶಾಸ್ತ್ರ, ಪ್ರಾಚೀನ ಗ್ರಂಥಗಳ ಅಗತ್ಯ ಎಷ್ಟಿದೆಯೋ ವೈಜ್ಞಾನಿಕ ಪರಿಭಾಷೆಯ ಅಗತ್ಯವೂ ಅಷ್ಟೇ ಇದೆ ಎಂದು ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಪ್ರತಿಪಾದಿಸಿದರು.

ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ, ಭಾರತೀಯ ಗೋ ಪರಿವಾರ- ಕರ್ನಾಟಕ ಮತ್ತು ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಗರದ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಲೆನಾಡು ಗಿಡ್ಡ ಹಬ್ಬ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಇಂದಿನ ಪೀಳಿಗೆಗೆ ವೈಜ್ಞಾನಿಕ ಭಾಷೆಯಲ್ಲಿ ಹೇಳಿದರಷ್ಟೇ ಅರ್ಥವಾಗುತ್ತದೆ. ಆದ್ದರಿಂದ ದೇಶಿ ತಳಿಗಳ ಮಹತ್ವ ವಿವರಿಸುವಲ್ಲಿ ವಿಜ್ಞಾನದ ಪಾತ್ರ ಮಹತ್ವದ್ದು. ಮಲೆನಾಡು ಗಿಡ್ಡದಂಥ ಅಪೂರ್ವ ತಳಿಗಳ ಮಹತಿಯನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮಲೆನಾಡು ಗಿಡ್ಡ ಹಬ್ಬದಂಥ ಕಾರ್ಯಕ್ರಮಗಳು ಹೆಚ್ಚು ಪ್ರಸ್ತುತ ಎಂದು ಬಣ್ಣಿಸಿದರು.

ಮನೆಯಲ್ಲಿ ಶೋಕಿಗಾಗಿ ನಾಯಿ ಸಾಕುವುದಕ್ಕಿಂತ ಮಲೆನಾಡು ಗಿಡ್ಡದಂಥ ತಳಿಗಳನ್ನು ಮನೆಯಲ್ಲೇ ಬೆಳೆಸಿದರೂ ಸಾಕಷ್ಟು ಪ್ರಯೋಜನವಿದೆ. ಈ ಅವಕಾಶವನ್ನು ನಾವು ಬಳಸಿಕೊಳ್ಳಬೇಕು; ಗೋವುಗಳನ್ನು ನಿಸ್ವಾರ್ಥವಾಗಿ ಸಾಕುವವರನ್ನು ಸಮಾಜ ಗುರುತಿಸಿ, ಗೌರವಿಸಬೇಕಿದೆ ಎಂದರು.

RELATED ARTICLES  ಅಂಕೋಲಾ ಸಮೀಪ ಅಪಘಾತ : ನಿವೃತ್ತ ಎ ಎಸೈ ದುರ್ಮರಣ

ಗೋವುಗಳನ್ನು ಸಾಗಾಣಿಕೆ ಮಾಡುವಲ್ಲಿ ಇಂದು ದೊಡ್ಡ ಸಮಸ್ಯೆ ಎದುರಾಗುತ್ತಿದೆ. ಪ್ರಯಾಣದ ಸುಧೀರ್ಘ ಅವಧಿಯಲ್ಲಿ ಮೇವು, ನೀರು, ಗಾಯದ ಸಮಸ್ಯೆಯಂಥ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಗೋಸ್ವರ್ಗ ವಿಶೇಷ ವಾಹನ ಅಭಿವೃದ್ಧಿಪಡಿಸುತ್ತಿದೆ. ಅಂತೆಯೇ ಗೋವುಗಳಿಗೆ ಸಾಗಾಣಿಕೆಯಲ್ಲಿ ತೊಂದರೆಯಾಗದಂತೆ ಪ್ರತ್ಯೇಕ ಕಂಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಿ, ಅದರಲ್ಲಿ ಮೇವು- ನೀರಿನ ಲಭ್ಯತೆ ಇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ಇಂದು ಗೋಸಾಕಾಣಿಕೆಯನ್ನು ಎಷ್ಟೋ ಮಂದಿ ತ್ಯಜಿಸಿ, ಗೋವುಗಳನ್ನು ಗೋಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಇದು ಸಲ್ಲದು. ನಮ್ಮ ಅಪೂರ್ವ ತಳಿಗಳ ಮಹತ್ವ ತಿಳಿದುಕೊಂಡು ಅದನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ಮಾಡಿದರು.

ಗೋವುಗಳು ರೈತರ ಜತೆಗೆ, ಸಮಾಜದ ಜತೆಗೆ ಇದ್ದರಷ್ಟೇ ಸಮಾಜಕ್ಕೆ ಹಿತವಾಗುತ್ತದೆ. ಯಾವುದೋ ಸಂಘ ಸಂಸ್ಥೆ, ಮಠ ಮಾನ್ಯಗಳು ಇವುಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡರೂ ಅದರ ಪ್ರಯೋಜನ ಸೀಮಿತವಾಗುತ್ತದೆ ಎಂದು ನುಡಿದರು.

ನಮ್ಮ ಸುತ್ತಲಿನ ಪರಿಸರ, ಗೋ ತಳಿಗಳನ್ನು ತಿಳಿದುಕೊಳ್ಳುವುದೇ ಆತ್ಮಜ್ಞಾನ. ಗೋಸಂಕುಲದಲ್ಲಿ ಭಾರತೀಯ ತಳಿಗಳು ಶ್ರೇಷ್ಠ. ಅದರಲ್ಲೂ ಮಲೆನಾಡು ಗಿಡ್ಡ ಸರ್ವಶ್ರೇಷ್ಠ. ನಮ್ಮ ಊರು, ದೇಶ, ಗಿಡಮರ, ಗೋವುಗಳ ಬಗ್ಗೆ ತಿಳಿವಳಿಕೆ ಅಗತ್ಯ. ಇದು ಎಷ್ಟೋ ಕೆಡುಕುಗಳನ್ನು ನಿವಾರಿಸಬಲ್ಲದು ಎಂದು ಹೇಳಿದರು. ಇದು ವಿಜ್ಞಾನದ ಜತೆಗೆ ಆಧ್ಯಾತ್ಮ ಕೂಡಾ ಹೌದು. ಗೋವಿನಲ್ಲಿ ನಮ್ಮ ಊಹೆಗೂ ನಿಲುಕದ ಹಲವು ಅಂಶಗಳಿವೆ. ಇವು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ವೈಜ್ಞಾನಿಕ ಅಂಶಗಳನ್ನು ತಿಳಿದುಕೊಂಡರೂ ನಾವು ಗೋವುಗಳನ್ನು ಪೂಜಿಸಲು ಆರಂಭಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.

RELATED ARTICLES  ಮನೆಯ ಬೀಗ ಮುರಿದು ಲಕ್ಷಾಂತರ ರೂ ಎಗರಿಸಿದ ಕಳ್ಳರು.

ಎನ್‍ಡಿಆರ್‍ಐ ದಕ್ಷಿಣ ವಿಭಾಗ ನಿರ್ದೇಶಕ ಡಾ.ಕೆ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಯ ಗೋ ಪರಿವಾರ- ಕರ್ನಾಟಕದ ಖಜಾಂಚಿ ಮುರಳೀಧರ ಪ್ರಭು ಅವಲೋಕನ ನಡೆಸಿದರು. ಡಾ.ಎಂ.ಪಿ.ಕರ್ಕಿ, ಮಂಜುನಾಥ ಭಟ್ ಸುವರ್ಣಗದ್ದೆ, ರಾಜು ಹೆಬ್ಬಾರ್, ಡಾ.ವಿಶ್ವನಾಥ್ ವಿ.ಭಟ್, ತಾಲೂಕು ಗೋ ಪರಿವಾರದ ಅಧ್ಯಕ್ಷ ಯೋಗೀಶ್ ರಾಯ್ಕರ್ ಉಪಸ್ಥಿತರಿದ್ದರು.

ಗೋಸೇವೆಯಲ್ಲಿ ನಿರತರಾದ ವಿನಾಯಕ ಭಟ್ ಕಾನ್ಸೂರು, ಸುಬ್ರಾಯ ಪರಮೇಶ್ವರ ಶೆಟ್ಟಿ, ಸತೀಶ್ ಗೌಡ ಮುಲ್ಲೆಹಿತ್ಲು ಅವರನ್ನು ಸನ್ಮಾನಿಸಲಾಯಿತು. ಹೆಚ್ಚು ಹಾಲು ಕೊಡುವ ಹಸು ಸಾಕಿದವರಿಗೆ ಬಹುಮಾನ ವಿತರಿಸಲಾಯಿತು.