ಪಣಜಿ: ತೀವ್ರ ಅನಾರೋಗ್ಯದಿಂದ ನಿನ್ನೆ ವಿಧಿವಶರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅಂತ್ಯಕ್ರಿಯೆ ಇಂದು ನೆರವೇರಲಿದೆ. ಭಾನುವಾರ ಸಂಜೆ 06:40ಕ್ಕೆ ವಿಧಿವಶರಾದ ಅವರು ಅಂತಿಮ ಸಂಸ್ಕಾರ ಇಲ್ಲಿನ ಮಿರಾಮಾರ್ ನಲ್ಲಿ ನೆರವೇರಿಸಲಾಗುತ್ತದೆ ಎಂದು ಬಿಜೆಪಿ ವಕ್ತಾರರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಂಜೆ 4 ಗಂಟೆವರೆಗೆ ಪಣಜಿಯ ಕಲಾ ಅಕಾಡೆಮಿಯಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆಗೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಪರಿಕ್ಕರ್ ಅವರ ಅಂತಿಮ ಯಾತ್ರೆ ಮೆರವಣಿಗೆ ಮೂಲಕ ನಡೆಯಲಿದ್ದು, ಸಂಜೆ 5 ಗಂಟೆಗೆ ಪಣಜಿಯಲ್ಲಿರುವ ಮೀರಾಮಾರ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ವಕ್ತಾರರು ತಿಳಿಸಿದ್ದಾರೆ ಎನ್ನಲಾಗಿದೆ.
ಪರಿಕ್ಕರ್ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಬಿಜೆಪಿಯ ಪ್ರಮುಖ ಮುಖಂಡರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.