ಕುಮಟಾ: ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಎರಡನೆ ದರ್ಜೆ ನಾಗರಿಕರನ್ನಾಗಿ ನೋಡುವ ಪರಿ ಬದಲಿಸುವ ಪ್ರಯತ್ನ ಮಾಡಬೇಕಾಗಿದೆ. ಸ್ತ್ರೀ ಪುರುಷರ ನಡುವೆ ಅಸಮಾನತೆ ಮತ್ತು ಬೇಧ ಭಾವಗಳು ಜೈವಿಕ ಹುಟ್ಟಿನಿಂದ ಬಂದಿಲ್ಲ. ಲಿಂಗ ಅಸಮಾನತೆಗೆ ಸಾಂಸ್ಕøತಿಕ ಹಿನ್ನೆಲೆ ಇರುವುದರಿಂದ ಅವು ಬೇಗ ಅಳಿಸಿ ಹೋಗದೆ ಮುಂದುವರಿಯುತ್ತದೆ. ಕಾಲಕ್ರಮದಲ್ಲಿ ಅಲ್ಪ ಸ್ವಲ್ಪ ರೂಪಾಂತರ ಹೊಂದಿದಂತೆ ಕಂಡರೂ, ಅಸಮಾನತೆ ಉಳಿದುಕೊಂಡೇ ಹೋಗುತ್ತದೆ. ಇದನ್ನು ದೂರಮಾಡಲು ಮಹಿಳೆಯಿಂದಲೇ ಮಾತ್ರ ಸಾಧ್ಯ. ಹೊಸ ಹುಟ್ಟನ್ನು ಪರಿವರ್ತಿಸಲು ಬೇಕಾದ ಛಲ ಮಹಿಳೆ ಹೊಂದಬೇಕು. ಮಹಿಳೇ ಕೇವಲ ಗೃಹಿಣಿಯಲ್ಲ, ಆಕೆ ಇಡಿಯ ಮನುಕುಲವನ್ನೇ ಹೊತ್ತ ಜಗಜ್ಜನನಿ. ಅಂತರಾಷ್ಟ್ರೀಯ ಈ ವರ್ಷದ ಮಹಿಳಾ ದಿನದ ‘ಸಮಾನವಾಗಿ ಯೋಚಿಸಿ, ಚತುರತೆಯಿಂದ ನಿರ್ಮಿಸಿ, ಬದಲಾವಣೆಯನ್ನು ನವೀಕರಿಸುವ’ ಉದ್ದೀಶ್ಯ ಆಗ ಮಾತ್ರ ಈಡೇರಬಲ್ಲದು ಎಂದು ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎನ್.ಆರ್.ಗಜು ನುಡಿದರು.
ಅವರು ಇಲ್ಲಿಯ ಕೆನರಾ ಕಾಲೇಜು ಸೊಸೈಟಿಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ವುಮೆನ್ಸ್ ರಿಡ್ರೆಸಲ್ ಸೆಲ್ ‘ಪ್ರೇರಣಾ’ ಹಮ್ಮಿಕೊಂಡ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಅನಾರೋಗ್ಯಕರ ಪೈಪೋಟಿಯ ಪಾಶ್ಚಾತ್ಯೀಕರಣ, ಮೀಟೂ ಅಭಿಯಾನ, ಮಹಿಳಾ ಸಮಾನತೆಯೊಂದಿಗಿನ ಹೋರಾಟ ಬದುಕನ್ನು ಕಸಿದುಕೊಳ್ಳುವಂತಾದೀತೆಂಬ ಆತಂಕ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ನೂತನವಾಗಿ ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿದ ಡಾ.ಪ್ರೀತಿ ಭಂಡಾರಕರ ಅವರನ್ನು ಎನ್.ಆರ್.ಗಜು ಅಭಿನಂದಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ನೂತನ ಪ್ರಾಚಾರ್ಯೆ ಡಾ.ಪ್ರೀತಿ ಭಂಡಾರಕರ ಮಹಿಳಾ ದಿನಾಚರಣೆಯ ನಿಮಿತ್ತ ಎಲ್ಲರೂ ಮಹಿಳೆಯನ್ನೇ ಭಾಷಣಕ್ಕೆ ಕರೆಯಿಸುವುದಕ್ಕೆ ಪ್ರತಿಕ್ರಿಯಿಸುತ್ತಾ ಮಹಿಳೆಯರ ಬಗ್ಗೆ ಅಪಾರ ಗೌರವ, ಕಾಳಜಿ ಇರುವ ಪುರುಷರನ್ನು ಆಹ್ವಾನಿಸಿ ಗೌರವ ನೀಡಿದ್ದಾಗಿ ಪ್ರಸ್ತಾಪಿಸಿದರು. ಗಂಡು ಹೆಣ್ಣು ಸಾಮರಸ್ಯದಿಂದ ಕೂಡಿ ಬಾಳಿದಾಗ ಮಾತ್ರ ಹಸನಾದ ಬದುಕು ಕಟ್ಟಿಕೊಳ್ಳಬಹುದೆಂದು ಹಿತ ನುಡಿದರು. ಹಿರಿಯ ಉಪನ್ಯಾಸಕ ಡಾ.ಡಿ.ಡಿ.ಭಟ್ಟ ಅತಿಥಿಗಳನ್ನು ಪರಿಚಯಿಸಿದರು. ಸೆಲ್‍ನ ಕಾರ್ಯದರ್ಶಿ ಶಿಕ್ಷಕ ವಿದ್ಯಾರ್ಥಿ ಕುಮಾರಿ ಸಂಗೀತಾ ಶೆಟ್ಟಿ ಸ್ವಾಗತಿಸಿದರು. ಮತ್ತೊಬ್ಬ ಶಿಕ್ಷಕ ವಿದ್ಯಾರ್ಥಿ ಕುಮಾರಿ ಭವ್ಯಾ ಭಟ್ಟ ನಿರೂಪಿಸಿದರು. ದೈಹಿಕ ನಿರ್ದೇಶಕ ಡಾ.ಜಿ.ಡಿ.ಭಟ್ಟ, ಹತ್ತು ಪುರುಷ ವಿದ್ಯಾರ್ಥಿಗಳು ಮತ್ತು 160 ಮಹಿಳಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.