ಕುಮಟಾ : ಜಿಲ್ಲೆಗರು ಕಾತರದಿಂದ ಕಾಯುತ್ತಿದ್ದ ವಿನಾಯಕ ಬ್ರಹ್ಮೂರು ನಿರ್ದೇಶನದ ‘ಆಚೆ’ ಚಿತ್ರದ ಮೊದಲ ಟೀಸರ್ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿದ್ದ ಈ ಸಿನಿಮಾದ ಫಸ್ಟ್‍ಲುಕ್ ಬಗ್ಗೆ ಇದ್ದ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದ್ದು ಒಂದು ನಿಮಿಷದ ಟೀಸರ್‍ನ ಹೊರಬಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಟೀಸರ್ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಚಿತ್ರದ ಮೇಲೆ ಕುತೂಹಲ ಹೆಚ್ಚಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.
ಬಿಳಗಿ ವರ್ಷನ್ ಟೀಸರ್ : ಚಿತ್ರದ ಎರಡು ವಿಭಿನ್ನ ಟೀಸರ್ಗಳನ್ನು ರಿಲೀಸ್ ಮಾಡಲು ನಿರ್ದೇಶಕ ವಿನಾಯಕ ಬ್ರಹ್ಮೂರು ನಿರ್ಧರಿಸಿದ್ದಾರಂತೆ. ಇಬ್ಬರು ಖ್ಯಾತ ರಂಗಭೂಮಿ ಕಲಾವಿದರು ಅಭಿನಯಿಸುತ್ತಿರುವುದರಿಂದ ಇದು ಮೊದಲನೇ ಟೀಸರ್ ಆಗಿದ್ದು ಬಿಳಗಿ ವರ್ಷನ್ ಟೀಸರ್ ಎಂಬ ಹೆಸರಿನಲ್ಲಿಯೇ ರಿಲೀಸ್ ಆಗಿದೆ. ಇದರಲ್ಲಿ ರಂಗನಾಯಕ ದಯಾನಂದ ಬಿಳಗಿ ವಿಜೃಂಭಿಸಿದ್ದಾರೆ. ಟೀಸರ್‍ನುದ್ದಕ್ಕೂ ಬಿಳಗಿಯವರ ನಟನೆ ಹಾಗೂ ಸುನೀಲ ಹೆಗಡೆ ತಟ್ಟೀಸರ ಅವರ ಕ್ಯಾಮೆರಾ ಕೈಚಳಕ ಹೈಲೈಟ್ ಆಗಿದೆ. ಹಾಗೆಯೇ ಬಿಳಗಿಯವರ ಪಾತ್ರದ ಬಗ್ಗೆ ಕುತೂಹಲ ಗರಿಗೆದರಿದೆ. ಎರಡು ದಿನಗಳ ಅಂತರದಲ್ಲಿ ಮತ್ತೊಂದು ಟೀಸರ್ ಬಿಡುಗಡೆಯಾಗಲಿದ್ದು ಅದು ಹರ್ಷ ಹಿರಿಯೂರು ವರ್ಷನ್ ಆಗಿರಲಿದೆ.
ಗಣ್ಯರಿಂದ ಮೆಚ್ಚುಗೆ : ಚಿತ್ರ ನಿರ್ಮಾಣದಲ್ಲಿ ಸಹಕಾರ ನೀಡಿರುವ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿಂದಿನ ಎಲ್ಲಾ ಚಿತ್ರಗಳಿಗಿಂತ ಇದು ಒಂದು ಹೆಜ್ಜೆ ಮುಂದಿದೆ ಹಾಗೂ ಕುತೂಹಲಕಾರಿಯಾಗಿ ಮೂಡಿಬಂದಿದೆ ಎಂದರು. ಭಟ್ಕಳ ಗುರುಸುಧೀಂದ್ರ ಪದವಿ ಕಾಲೇಜಿನ ಪ್ರಾಂಶುಪಾಲರಾದ ನಾಗೇಶ ಭಟ್ಟ ಪ್ರತಿಕ್ರಿಯಿಸಿ ನಮ್ಮ ಜಿಲ್ಲೆಯಲ್ಲಿ ಸಿನಿಮಾ ನಿರ್ಮಾಣದಂತಹ ಪ್ರಯತ್ನಕ್ಕೆ ಕೈ ಹಾಕಿರುವುದು ನಿಜಕ್ಕೂ ಹೆಮ್ಮೆ ಪಡುವ ವಿಷಯ. ಎಲ್ಲಾ ಪ್ರತಿಭೆಗಳು ಅಭಿನಂದನಾರ್ಹರು. ಜಿಲ್ಲೆಗರು ಬೆಳೆಯುವಂತಾಗಬೇಕು ಎಂದರು.