ಹೊನ್ನಾವರ : ಯಕ್ಷಗಾನ ಕನ್ನಡ ಭಾಷೆಯನ್ನು ಉಳಿಸುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಯಕ್ಷಗಾನದ ಭಾಷೆಯ ಸೊಗಡು, ಮುಖವರ್ಣಿಕೆ, ವೇಷಭೂಷಣ, ಕುಣಿತಗಳೆಲ್ಲವೂ ವೈಶಿಷ್ಟ್ಯಪೂರ್ಣವಾಗಿದ್ದು ಅದಕ್ಕೆ ಅದರದೇ ಆದ ಆಸ್ವಾದಿಸುವ ವರ್ಗವಿದೆ ಎಂದು ಕರ್ನಾಟಕ ಅಕಾಡೆಮಿ ಅಧ್ಯಕ್ಷರಾದ ಎಮ್.ಎ.ಹೆಗಡೆ ಅಭಿಪ್ರಾಯ ಪಟ್ಟರು. ಅವರು ಶ್ರೀ ನಾರಾಯಣ ಸಾಹಿತ್ಯಿಕ, ಸಾಂಸ್ಕøತಿಕ ಪ್ರತಿಷ್ಠಾನ(ರಿ) ಹೊನ್ನಾವರ, ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಕಿ ಇದರ ಸಂಯುಕ್ತಾಶ್ರಯದಲ್ಲಿ ಮಂಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಯಕ್ಷಗಾನ ಸಂಕೀರ್ಣೋತ್ಸವ, ಯಕ್ಷನೃತ್ಯ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಡಾ.ಸುರೇಶ ನಾಯ್ಕರವರ ನಾರಾಯಣ ಪ್ರತಿಷ್ಠಾನವು ಸಾಹಿತ್ಯ ಮತ್ತು ಸಾಂಸ್ಕøತಿಕ ಮುಖ್ಯವಾಹಿನಿಯಲ್ಲಿ ಯಕ್ಷಗಾನದ ಕುರಿತು ವಿಶೇಷ ಕಾಳಜಿ ವಹಿಸಿ ಕಾರ್ಯಕ್ರಮ ಸಂಘಟಿಸುವ ಮುಖೇನ ಒಂದು ಅರ್ಥಪೂರ್ಣ ಕಾರ್ಯಕ್ರಮ ಸಂಘಟಿಸಿದ್ದಾರೆ. ಇಂದು ಯಕ್ಷಗಾನದ ಪ್ರಸಂಗಗಳು ಎಲ್ಲೆಡೆ ಪ್ರಚಲಿತದಲ್ಲಿದ್ದರೂ ಅದರ ಕುರಿತು ಚರ್ಚೆ, ಸಂವಾದಗಳು ನಡೆಯುತ್ತಿಲ್ಲ. ಆದರೆ ನಾರಾಯಣ ಪ್ರತಿಷ್ಠಾನವು ಇಂತಹ ಕಾರ್ಯಕ್ರಮ ಆಯೋಜಿಸಿ ಯುವಜನತೆ ಯಕ್ಷಗಾನದ ಕುರಿತು ಆಸಕ್ತಿ ಹೊಂದುವಂತೆ ಮಾಡಿದ್ದಾರೆ ಎಂದು ನುಡಿದರು.


ಅತಿಥಿಗಳಾಗಿ ಆಗಮಿಸಿದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅರವಿಂದ ಕರ್ಕಿಕೋಡಿ ಯಕ್ಷಗಾನದ ಪ್ರಸಂಗಕರ್ತರೂ ಕೂಡ ಸಾಹಿತಿಗಳೇ ಆಗಿರುತ್ತಾರೆ. ಹಾಗಾಗಿಯೇ ನಾವು ನಮ್ಮ ಅವಧಿಯ ಸಾಹಿತ್ಯ ಸಮ್ಮೇಳನಗಳಲ್ಲಿ ಯಕ್ಷಗಾನಕ್ಕೆ ವಿಶೇಷ ಒತ್ತು ನೀಡಿ ಗೋಷ್ಠಿಗಳನ್ನು ಏರ್ಪಡಿಸಿದ್ದೇವೆ. ಯಕ್ಷಗಾನಕ್ಕೆ ಹೊನ್ನಾವರದ ಕಲಾವಿದರು ನೀಡಿದ ಕೊಡುಗೆ ಅಪಾರ. ಇಲ್ಲಿನ ಹಲವು ಕಲಾವಿದರು ತೆಂಕು ಮತ್ತು ಬಡಗು ತಿಟ್ಟಿನಲ್ಲೂ ತಮ್ಮ ಕಲಾ ಪ್ರೌಢಿಮೆ ಮೆರೆದಿರುವದು ನಮ್ಮ ತಾಲೂಕಿಗೆ ಹೆಮ್ಮೆ. ಮತ್ತು ಅಭಿಮಾನ ಪಡುವ ಸಂಗತಿಯಾಗಿದೆ ಎಂದು ಅಭಿಪ್ರಾಯ ಪಟ್ಟರು. ಮತ್ತೋರ್ವ ಅತಿಥಿ ಪಿ.ಯು.ಕಾಲೇಜಿನ ಪ್ರಾಚಾರ್ಯರಾದ ವಿದ್ಯಾ ಟಿ. ನಾಯಕ ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮ ಸಂಘಟಿಸುವು ಮೂಲಕ ನಾರಾಯಣ ಪ್ರತಿಷ್ಠಾನವು ಜನಮುಖಿಯಾಗುವ ಕೆಲಸ ಮಾಡುತ್ತಿದೆ ಎಂದರು. ಡಾ.ಎನ್.ಆರ್.ನಾಯಕ ಯಕ್ಷಗಾನದ ವೇಷಭೂಷಣಗಳು ಜನಪದ ಕಲೆಯಂತಿದ್ದರೂ ಭಿನ್ನವಾಗಿ ನಿಲ್ಲುತ್ತದೆ ಎಂದರು. ಡಾ.ಸುರೇಶ ನಾಯ್ಕರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಂದೆಯ ಹೆಸರಿನಲ್ಲಿ ಸ್ಥಾಪಿಸಿದ ನಾರಾಯಣ ಪ್ರತಿಷ್ಠಾನವು ಕಳೆದ ಮೂರುವರ್ಷಗಳಿಂದ ಜಾನಪದ ಸಾಹಿತ್ಯ, ಜಾನಪದ ಕಲೆ, ಕವಿಗೋಷ್ಠಿ, ಪುಸ್ತಕ ಬಿಡುಗಡೆ, ನಾಟಿವೈದ್ಯರ ಸನ್ಮಾನ ಹೀಗೆ ಹಲವು ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದೆ. ಈ ವರ್ಷ ಯಕ್ಷಗಾನ ಅಕಾಡೆಮಿ ಮತ್ತು ಮಂಕಿ ಸರ್ಕಾರಿ ಪದವಿ ಕಾಲೇಜುಗಳು ನಮ್ಮ ಜೊತೆ ಸಹಕರಿಸಿರುವುದು ನಮಗೂ ಸಂತಸ ನೀಡಿದೆ. ಜನಪರವಾದ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಸಂಘಟಿಸಲು ನಮ್ಮ ಪ್ರತಿಷ್ಠಾನವು ಯೋಜನೆ ರೂಪಿಸುತ್ತದೆ ಎಂದು ಅಭಿಪ್ರಾಯ ಪಟ್ಟರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ.ಗಣೇಶ ವಿ.ಜಿ. ಪದವಿ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಂಶೋಧನೆಯಲ್ಲಿ ತೊಡಗಲು ಇಂತಹ ವಿಚಾರ ಸಂಕಿರಣಗಳು ನೆರವಾಗುತ್ತದೆ. ಯಕ್ಷಗಾನ ನಮ್ಮ ನಾಡಿನ ಗಂಡುಕಲೆ. ಯಕ್ಷಗಾನದ ಮೇರು ನಟ ಚಿಟ್ಟಾಣಿ ರಾಮಚಂದ್ರ ಹೆಗಡೆ, ಶಂಭು ಹೆಗಡೆ, ಜಲವಳ್ಳಿ ವೆಂಕಟೇಶ ರಾವ್ ಮೊದಲಾದ ಕಲಾವಿದರು ಬಡಾಬಡಗು ತಿಟ್ಟನ್ನು ಉಚ್ಚ್ರಾಯಸ್ಥಿತಿಗೆ ಕೊಂಡೊಯ್ದಿದ್ದಾರೆ. ಇಂತಹ ಕಲೆಯ ಕುರಿತು ವಿಸ್ತಾರವಾದ ಚರ್ಚೆ, ಸಂವಾದಗಳು ನಮ್ಮ ಕಾಲೇಜಿನಲ್ಲಿ ನಡೆಯುತ್ತಿರುವುದು ನಮಗೂ ಬಹಳ ಸಂತೋಷ ನೀಡಿದೆ ಎಂದು ಅಭಿಪ್ರಾಯ ಪಟ್ಟರು.

RELATED ARTICLES  ಜಿ.ಐ ಹೆಗಡೆ ಕಡಬಾಳ ಅವರಿಗೆ ಆತ್ಮೀಯ ಬೀಳ್ಕೊಡುಗೆ: ವೃತ್ತಿ ಜೀವನ ನೆನೆದ ಶಿಕ್ಷಕ.


ನಂತರ ನಡೆದ ವಿಚಾರಗೋಷ್ಠಿಯಲ್ಲಿ ಗಣಪತಿ ಹೆಗಡೆ ಕೊಂಡದಕುಳಿಯವರು ಯಕ್ಷಗಾನದ ಹುಟ್ಟು ಮತ್ತು ಬೆಳವಣಿಗೆ, ಡಾ.ಶ್ರೀಧರ ಗೌಡ ಉಪ್ಪಿನಗಣಪತಿಯವರು ಹೊನ್ನಾವರ ತಾಲೂಕಿನ ಯಕ್ಷಗಾನ ಕಲಾವಿದರು, ಡಾ.ಡಿ.ಎಸ್.ದೊಡ್ಡಮನಿಯವರು ಹೊನ್ನಾವರ ತಾಲೂಕಿನ ಪ್ರಸಂಗಕರ್ತರು ಹಾಗೂ ಭಾಗವತರು ಎಂಬ ವಿಷಯಗಳ ಮೇಲೆ ಪ್ರಬಂಧ ಮಂಡಿಸಿದರು.

RELATED ARTICLES  ಶಕ್ತಿಯಿರುವುದು ಆಯುಧದಲ್ಲಲ್ಲ, ಬದಲಾಗಿ ಸಂಘಟನೆಯಲ್ಲಿ : ಆರ್.ಎಸ್.ಎಸ್ ಹಿರಿಯ ಪ್ರಚಾರಕ ಸು.ರಾಮಣ್ಣ


ಸಂವಾದಗೋಷ್ಠಿಯಲ್ಲಿ ಡಾ.ಬಸವರಾಜ, ಪ್ರೊ.ರಾಘವೇಂದ್ರ ಶೆಟ್ಟಿ, ಡಾ.ರಂಗನಾಥ ಕಂಟನಕುಂಟೆ, ಶ್ರೀ ವಿ.ಜಿ.ನಾಯ್ಕ, ಡಾ.ನಾರಾಯಣ ಮಧ್ಯಸ್ಥ, ಪ್ರೋ.ಮಾದೇಶ, ಕಮಲಾ ಕೊಂಡದಕುಳಿ, ಎಮ್.ಡಿ.ಹರಿಕಾಂತ, ಸುಧಾ ಭಂಡಾರಿ, ಪ್ರೊ.ವೆಂಕಟಮುರ್ತಿ, ರಾಮದಾಸ ಸಂವಾದಕರಾಗಿ ಪಾಲ್ಗೊಂಡಿದ್ದರು. ಜನಾರ್ದನ ಹರನೀರು ಸಂವಾದಗೋಷ್ಠಿ ನಡೆಸಿಕೊಟ್ಟರು. ಕುಮಾರಿ ಪಿ.ಧನ್ಯ ಕಡತೋಕ ಮತ್ತು ಕುಮಾರ ಸಮ್ಮೇದ ಅಜಿತ್ ಜೈನ್ ಗುಂಡಬಾಳ ರವರು ಪ್ರದರ್ಶಿಸಿದ ಯಕ್ಷನೃತ್ಯ ಎಲ್ಲರ ಗಮನ ಸೆಳೆಯಿತು. ಸುರೇಶ ನಾಯ್ಕ ಹೊಳೆಗದ್ದೆ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ರಾಯಸ್ ವಂದಿಸಿದರು.