ಕುಮಟಾ: ಕರ್ನಾಟಕ ಸರಕಾರ ಸಚಿವಾಲಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಜಲ ಸಾಕ್ಷರತೆ, ಜಲ ಸಂರಕ್ಷಣೆ, ನೀರಿನ ಪ್ರಜ್ಞಾವಂತ ಬಳಕೆ ಹಾಗೂ ಹಸರೀಕರಣಕ್ಕಾಗಿ “ಜಲಾಮೃತ” ಎಂಬ ಸಮುದಾಯ ಚಾಲಿತ ಸಮಗ್ರ ಚಳವಳಿಯ ಆಚರಣೆಯ ಜಾಗೃತಿ ಅಭಿಯಾನವನ್ನು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಕಸ್ತೂರಬಾ ಇಕೋ ಕ್ಲಬ್ ಹಾಗೂ ನಿಸರ್ಗ ಇಕೋ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ತಾಲೂಕಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಟಿ.ನಾಯ್ಕ ಗಿಡಕ್ಕೆ ನೀರು ಚಿಮುಕಿಸುವ ಮೂಲಕ ಉದ್ಘಾಟಿಸಿ ನೀರನ್ನು ಸಂರಕ್ಷಿಸಬೇಕಾದ ಅಗತ್ಯದ ಕುರಿತು ಮಾತನಾಡಿದರು.
ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಅಭಿಯಂತರ ರಾಘವೇಂದ್ರ ನಾಯ್ಕ ಶುದ್ಧ ನೀರು ಅತ್ಯಂತ ದುರ್ಲಭ. ಅದರ ಮೂಲಗಳನ್ನು ಸಂರಕ್ಷಿಸದಿದ್ದರೆ ಮುಂದೊಂದು ದಿನ ಉಂಟಾಗುವ ಭೀಕರತೆ ಊಹಿಸಲೂ ಅಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಅಕ್ಷರ ದಾಸೋಹದ ನಿರ್ದೇಶಕ ದೇವರಾಯ ನಾಯಕ ಕುಡಿಯಲು ಯೋಗ್ಯವಲ್ಲದ ರಾಸಾಯನಿಕ ಮಿಶ್ರಿತ ನೀರು ಅಣುಬಾಂಬಿಗಿಂತಲೂ ಹೆಚ್ಚು ಹಾನಿಕರವಾದುದೆಂದು ಎಚ್ಚರಿಸಿದರು. ಪರಿಸ್ಥಿತಿ ನಿಭಾಯಿಸದೇ ಇದ್ದರೆ ನೀರಿಗಾಗಿ ಯುದ್ಧ ಎದುರು ನೋಡುವ ಕಾಲ ಸನ್ನಿಹಿತವಾಗಬಲ್ಲದೆಂಬ ಆತಂಕ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕ ಎನ್.ಆರ್.ಗಜು ಶುದ್ಧ ನೀರಿನ ಮಹತ್ವ ತಿಳಿಸುತ್ತಾ ಅದು ಅಮೃತಕ್ಕೂ ಮಿಗಿಲು. ನೀರು ಪ್ರಕೃತಿ ನಮಗೆ ನೀಡುವ ವರ. ಬೇಸಿಗೆಯ ಈ ದಿನಗಳಲ್ಲಿ ನೀರು ನಮ್ಮ ಕೈಜಾರಿ ಹೋಗದಂತೆ ಸಂರಕ್ಷಿಸುವುದು ಬಹಳ ಅವಶ್ಯಕ. ಇದು ಮನ ಪರಿವರ್ತನೆಯ ಕಾಲ. ನಮ್ಮ ಮನಸ್ಸು ಪರಿವರ್ತನೆಯಾದರಷ್ಟೇ ಈ ಪರಿಸ್ಥಿತಿ ಬದಲಾಗಲು ಸಾಧ್ಯವೆಂದು ನೀರಿನ ಮಿತಬಳಕೆಯ ಬಗ್ಗೆ ತಿಳಿಸಿದರು. ಬರಿದಾಗುತ್ತಿರುವ ಭೂಗರ್ಭದ ಒಡಲನ್ನು ಭರ್ತಿ ಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಚಿತ್ರಿಗಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಗಣಪತಿ ನಾಯ್ಕ, ತಾಲ್ಲೂಕು ಪಂಚಾಯತ್ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಪಿ.ಎಂ.ಮುಕ್ರಿ, ಎರಡೂ ಶಾಲೆಯ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದು ನೀರಿನ ಅಮೂಲ್ಯತೆಯ ಮನಗಂಡು ಸಾಮಾಜಿಕ ಜಾಗೃತಿ ಹೆಚ್ಚಿಸುವಲ್ಲಿ ನೆರವಾದರು.
ಪ್ರಾರಂಭದಲ್ಲಿ ಶ್ರೀ ರಶ್ಮೀ ಭಟ್ಟ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಅನಿಲ್ ರೊಡ್ರಿಗಸ್ ಸ್ವಾಗತಿಸಿದರು. ಶಿಕ್ಷಕ ಕಿರಣ ಪ್ರಭು ನಿರೂಪಿಸಿ ವಂದಿಸಿದರು.
ಜಲದಿಂದ ಮನುಜ ಕುಲ, ಜಲವೇ ಜೀವ ಸಂಕುಲ, ಸೇವ್ ವಾಟರ್-ಸೇವ್ ಪ್ಯೂಟರ್, ನೀರು ಉಳಿಸಿ ಜೀವ ಉಳಿಸಿ, ನೀರಿನ ಮಿತ ಬಳಕೆ ಮಾಡಿ ಎಂಬಿತ್ಯಾದಿ ಘೋಷಣೆಗಳ ಮೂಲಕ ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆ ಹಾಗೂ ಚಿತ್ರಿಗಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಲ ಸಾಕ್ಷರತಾ ಕಿರು ಜಾಥಾ ಮೂಲಕ ಜಾಗೃತಿ ಮೂಡಿಸಿದರು