ಕುಮಟಾ: ಇಲ್ಲಿನ ಖಾಸಗಿ ಹೊಟೆಲ್ ಒಂದರಲ್ಲಿ ಸುದ್ಧಿ ಗೋಷ್ಠಿ ನಡೆಸಿದ ಸೂರಜ್ ನಾಯ್ಕ ಅಭಿಮಾನಿ ಬಳಗದ ಸದಸ್ಯರು ಬಿಜೆಪಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಹಾಗೂ ವಿಶ್ವನಾಥ ನಾಯ್ಕ ವಿರುದ್ಧ ಕಿಡಿಕಾರಿದರು.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸೂರಜ್ ನಾಯ್ಕ ಅಭಿಮಾನಿ ಬಳಗದ ಸಂತೋಷ ನಾಯ್ಕ ಅವರು, ನಮ್ಮ ಸಮಾಜದವರಾದ ಬಿಜೆಪಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಹಾಗೂ ವಿಶ್ವನಾಥ ನಾಯ್ಕ ನಮ್ಮ ಸಮಾಜದ ಮುಖಂಡ ಸೂರಜ್ ನಾಯ್ಕ ವಿರುದ್ಧ ಕೀಳಾಗಿ ಮಾತನಾಡಿರುವುದನ್ನು ನಾವು ಖಂಡಿಸುತ್ತೇವೆ.ಕೆಲವು ರಾಜಕೀಯ ಹಿತಾಸಕ್ತಿಗಳು ನಮ್ಮ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ ಎಂದರು.
ಸೂರಜ್ ನಾಯ್ಕ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಮಾತನಾಡಿದ್ದಾರೆ. ಅದಕ್ಕೆ ಅನಂತಕುಮಾರ ಹೆಗಡೆ ಉತ್ತರಿಸುವುದನ್ನು ಬಿಟ್ಟು ಪುರಸಭೆ ಚುನಾವಣೆ ಗೆಲ್ಲಲಾಗದ ಪ್ರಶಾಂತ ನಾಯ್ಕ ಹಾಗೂ ವಿಶ್ವನಾಥ ನಾಯ್ಕ ಪ್ರತಿಕ್ರಿಯೆ ನೀಡಿರುವುದೇಕೆ ಎಂದರು.
ಇದೇ ಸಂದರ್ಭದಲ್ಲಿ ಲೋಕಸಭೆಗೆ ಈ ಜಿಲ್ಲೆಯಿಂದ ಐದು ಸಲ ಆಯ್ಕೆಯಾದ ಅನಂತಕುಮಾರ ಹೆಗಡೆ ಕುಮಟಾ ಭಾಗದಲ್ಲಿ ಎಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಸವಾಲು ಹಾಕಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ 22ಸಾವಿರದಷ್ಟು ಮತ ಪಡೆದ ಸೂರಜ್ ನಾಯ್ಕ ವಿರುದ್ಧ ಕೆಟ್ಟ ಶಬ್ದ ಉಪಯೋಗಿಸಿ ಮಾತನಾಡಿರುವುದು ಖಂಡನೀಯ. ಈ ರೀತಿ ನಮ್ಮ ಸಮಾಜದವರಾಗಿ ನಮ್ಮ ಸಮಾಜದವರ ವಿರುದ್ಧ ಮಾತನಾಡುವುದು ಸರಿಯಲ್ಲ .ಇವರು ನಮ್ಮ ಸಮಾಜದ ಪದಾಧಿಕಾರತ್ವವನ್ನು ತ್ಯಜಿಸಿ ಮಾತನಾಡಲಿ ಎಂದರು.
ಇದೇ ರೀತಿ ಸೂರಜ್ ನಾಯ್ಕ ವಿರುದ್ಧ ಮತ್ತೆ ಮಾತನಾಡಿದರೆ ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ನಾವು ನಮ್ಮದೇ ರೀತಿಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಪ್ರಶಾಂತ ನಾಯ್ಕ, ವಿಶ್ವನಾಥ ನಾಯ್ಕ ಅವರಿಗೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎ.ಪಿ.ಎಂ.ಸಿ ಸದಸ್ಯ ಸುಬ್ಬಯ್ಯ ನಾಯ್ಕ ಸೇರಿದಂತೆ ಸೂರಜ್ ನಾಯ್ಕ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.