ಕಾರವಾರ : ಲೋಕಸಭಾ ಚುನಾವಣೆಗೆ ಕೆನರಾ ಕ್ಷೇತ್ರದಿಂದ ಮೈತ್ರಿ ಸರ್ಕಾರದ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್‌ಗೆ ಟಿಕೇಟ್ ಖಚಿತವಾಗಿದೆ
ಮಂಗಳವಾರ ಜೆಡಿಎಸ್ ತನ್ನ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದು, ಉತ್ತರ ಕನ್ನಡ ಕ್ಷೇತ್ರಕ್ಕೆ ಸಂಭಾವ್ಯ ಪಟ್ಟಿಯಲ್ಲಿ ಈ ಮೊದಲೇ ಕೇಳಿಬರುತ್ತಿದ್ದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೆಸರನ್ನೇ ಅಂತಿಮಗೊಳಿಸಿದೆ.
ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಯಾವುದೇ ಪ್ರಗತಿ ಪರಿಶೀಲನಾ ಸಭೆ ಸೇರಿದಂತೆ ಯಾವುದರಲ್ಲೂ ಭಾಗಿಯಾಗದ ಸಚಿವ ಅನಂತ ಕುಮಾರ್ ಹೆಗಡೆ ಮೋದಿ ಹೆಸರಿನಲ್ಲಿ ಮತ ಕೇಳುತ್ತಾರೆ. ಅದನ್ನು ಬಿಟ್ಟು ತಾಕತ್ತಿದ್ದರೆ ತಾನು ಮಾಡಿದ ಅಭಿವೃದ್ಧಿ ಆಧಾರವಾಗಿಟ್ಟು ಮತ ಕೇಳಬೇಕು ಎಂದು ಸವಾಲು ಹಾಕಿದ್ದ ಆನಂದ್ ಅಸ್ನೋಟಿಕರ್ ಅವರಿಗೇ ಇದೀಗ ಟಿಕೆಟ್ ದೊರಕಿರುವುದು ಕದನ ಕಣ ರಂಗೇರುತ್ತಿದೆ.
ಐದು ಬಾರಿ ಸಂಸದರಾಗಿರುವ ಅನಂತಕುಮಾರ ಹೆಗಡೆಸಾಮಾಜಿಕ ಸೇವೆಗೆ ಬಂದವರಲ್ಲ. ಅವರೊಬ್ಬ ಅಹಂಕಾರಿ. ಇಷ್ಟು ವರ್ಷಗಳ ಕಾಲ ನಾಲಿಗೆಯಿಂದ ರಾಜಕೀಯ ಮಾಡಿದ್ದಾರೆ. ಪ್ರಚೋದಿತ ಭಾಷಣದಲ್ಲಿ ಜನರನ್ನು ಮರುಳು ಮಾಡಿದ್ದಾರೆ. ನಯಾಪೈಸೆ ಕೆಲಸ ಮಾಡಿಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಒಡದಾಳುವ ನೀತಿ ಅನುಸರಿಸುತ್ತಾರೆ. ಅವರು ಗೆದ್ದು ಬಂದರೆ ಜಿಲ್ಲೆಗೆ ಹಾನಿಯಾಗುತ್ತದೆ ಎಂದು ಆನಂದ ಅಸ್ನೋಟಿಕರ್ ಕಿಡಿಕಾರಿದ್ದರು. ಅದೂ ಅಲ್ಲದೆ ತಾನು ಅವರನ್ನು ಸೋಲಿಸಲು ಸಮರ್ಥ ಎಂದು ಅವರು ಮುಂದುವರಿದಿರುವುದು ಇದೀಗ ತೀವ್ರ ಕುತೂಹಲ ಕೆರಳಿಸಿದೆ.
ಐದು ಬಾರಿ ಸಂಸದರಾಗಿರುವಅನಂತಕುಮಾರ ಹೆಗಡೆ ಒಮ್ಮೆಯೂ ಅಡಕೆ ಬೆಳೆ ಹಾನಿ, ರೈತ ಬೆಳೆಗಾರರ ಸಾಲಮನ್ನಾಕ್ಕೆ ಸಂಬಂಧಿಸಿ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಜನಸಾಮಾನ್ಯರ, ಅಭಿವೃದ್ಧಿ ಪರವಾಗಿರದ ಅವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಹೇಳಿದ್ದರು.
ಹೊನ್ನಾವರ ಪರೇಶ ಮೇಸ್ತ ಸಾವಿನ ತನಿಖೆ ವರ್ಷವಾದರೂ ಮುಗಿದಿಲ್ಲ. ಈ ಬಗ್ಗೆ ಬಹಿರಂಗವಾಗಿ ಸಚಿವ ಹೆಗಡೆ ಹೇಳಿಕೆ ನೀಡದೇ ಹೇಡಿಯಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಪಕ್ಷ ದ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಿಸಿದ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಗಳು ಒಟ್ಟಾಗಿ ಚುನಾವಣೆ ಪ್ರಚಾರ ನಡೆಸಲಿವೆ. ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಆನಂದ ಅಸ್ನೋಟಿಕರ್ ಹೇಳಿದ್ದು ಇದೀಗ ಆ ಮಾತುಗಳು ಎಷ್ಟರ ಮಟ್ಟಿಗೆ ನಡೆಯಲಿದೆ ಎಂಬುದೇ ಪ್ರಶ್ನೆಯಾಗಿದೆ?