ಕುಮಟಾ: ಸರಕಾರದ ಶಿಕ್ಷಣ ಇಲಾಖೆ ಪಠ್ಯ ಬೋಧನೆ ಹಾಗೂ ವಾರ್ಷಿಕ ಪ್ರತಿಭಾ ಕಾರಂಜಿ ಸ್ಪರ್ಧೆ ಏರ್ಪಡಿಸುವ ಮೂಲಕ ನಾಟಕ, ನೃತ್ಯ, ಸಂಗೀತವೇ ಮೊದಲಾದ ರಂಗಭೂಮಿ ಚಟುವಟಿಕೆಗಳನ್ನು ಸ್ವಲ್ಪಮಟ್ಟಿಗಾದರೂ ಜೀವಂತವಾಗಿರಿಸುವಲ್ಲಿ ಯಶಸ್ವಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ತಾಲೂಕಾಧ್ಯಕ್ಷ ಎನ್.ಆರ್.ಗಜು ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಹೆಗಡೆಯ ಶಾಂತಿಕಾಂಬಾ ಪ್ರೌಢಶಾಲೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಚಿಂತನ ರಂಗ ಅಧ್ಯಯನ ಕೇಂದ್ರದಡಿ ಹಮ್ಮಿಕೊಂಡ ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಹಾರ್ಮೋನಿಯಂ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ರಂಗಾಸಕ್ತಿ ಹೊಂದಿರುವ ಮನಸ್ಸು ಸುಂದರ ಬದುಕನ್ನು ಕಟ್ಟಿಕೊಳ್ಳುವ ತವಕ ಹೊಂದಿರುತ್ತದೆ. ಜೀವನ ನಿರ್ವಹಣೆ ಅಂತಹ ಬದುಕನ್ನು ವಿಚಲಿತಗೊಳಿಸಬಾರದು ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಂತಿಕಾಂಬಾ ಪ್ರೌಢಶಾಲೆಯ ಪ್ರಭಾರಿ ಮುಖ್ಯಾಧ್ಯಾಪಕ ಎಸ್.ಬಿ.ನಾಯ್ಕ ರಂಗಭೂಮಿ ಕಲೆ ನವೀಕೃತ ಸಿನೇಮಾ ಪ್ರಪಂಚದಲ್ಲಿ ಕಣ್ಮರೆಯಾಗುತ್ತಿರುವುದಕ್ಕೆ ವಿಷಾದಿಸಿದರು.
ಈವತ್ತಿನ ಛಿದ್ರ ಕೌಟುಂಬಿಕ ವ್ಯವಸ್ಥೆ ರಂಗಭೂಮಿಯನ್ನು ಹೊಂಗನಸನ್ನು ಹೊಸಕಿ ಹಾಕುತ್ತಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಚಿಂತನ ರಂಗ ಅಧ್ಯಯನ ಕೇಂದ್ರದ ಅಧ್ಯಕ್ಷ ಕಿರಣ ಭಟ್ ಆತಂಕ ವ್ಯಕ್ತಪಡಿಸಿದರು. ಹೆಚ್ಚೆಚ್ಚು ಯುವಜನರು ರಂಗಚಟುವಟಿಕೆಗಳಲ್ಲಿ ಪಾಲ್ಗೊಂಡು ಹೊಸ ಚಿಂತನೆಗಳ ಮೂಲಕ ಹೊಸ ಸಮಾಜ ನಿರ್ಮಾಣಕ್ಕೆ ತೊಡಗಿಸಿಕೊಳ್ಳಿ ಎಂದು ಕರೆನೀಡಿದರು.
ವಿಶೇಷ ಆಕರ್ಷಣೆಯಾಗಿದ್ದ ವಿದ್ವಾನ್ ವಿಶ್ವನಾಥ ಹಿರೇಮಠ ಮತ್ತು ತಂಡದವರಿದ ಅಧ್ಯಯನ ಯೋಗ್ಯ ರಂಗ ಸಂಗೀತ ಕಾರ್ಯಕ್ರಮ ನೆರೆದವರ ಮನಸೂರೆಗೊಳಿಸಿತು.
ಮೋರಾರ್ಜಿ ವಸತಿ ವಿದ್ಯಾಲಯದ ಪ್ರಾಚಾರ್ಯ ಶ್ರೀನಿವಾಸ ನಾಯಕ ಸ್ವಾಗತಿಸಿದರು. ಎಸ್.ಡಿ.ಎಂ. ಮಹಾವಿದ್ಯಾಲಯದ ಉಪನ್ಯಾಸಕ ವಿದ್ಯಾಧರ ನಾಯ್ಕ ರಂಗ ಸಂದೇಶ ವಾಚಿಸಿದರು. ಶಿಕ್ಷಕ ಕಡತೋಕ ಪ್ರಮೋದ ನಾಯ್ಕ ನಿರೂಪಿಸಿದರು. ಧಾರೇಶ್ವರ ದಿನಕರ ಪ್ರೌಢಶಾಲೆಯ ಶಿಕ್ಷಕ ಯೋಗೀಶ ಪಟಗಾರ ವಂದಿಸಿದರು. ಕುಮಟಾ ರೋಟರಿಯ ನಿಯೋಜಿತ ಅಧ್ಯಕ್ಷ ಸುರೇಶ ಭಟ್, ವಿದ್ಯಾಧಿರಾಜ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಪ್ರಾಚಾರ್ಯ ರತನ್ ಗಾಂವಕರ್, ಯಕ್ಷಗಾನ ಕಲಾವಿದ ಗಣೇಶ ಭಂಡಾರಿ, ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ ನವೀನ್ ಎ.ಟಿ., ಮೋರಾರ್ಜಿ ವಸತಿ ವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಹಾಗೂ ರಂಗಾಸಕ್ತರು ಉಪಸ್ಥಿತರಿದ್ದರು.

RELATED ARTICLES  ಮೈಮೇಲೆ ಮೇಲೆ ಹರಿದ ಲಾರಿ : ವ್ಯಕ್ತಿ ಸಾವು