ಯಲ್ಲಾಪುರ: ಪಟ್ಟಣದ ವೈಟಿಎಸ್‍ಎಸ್ ಮೈದಾನದಲ್ಲಿ ಬಿಜೆಪಿ ಉತ್ತರಕನ್ನಡ ಹಮ್ಮಿಕೊಂಡಿದ್ದ ಬಿಜೆಪಿಯ ಘಟ್ಟದ ಮೇಲಿನ ಕಿತ್ತೂರು, ಖಾನಾಪುರ, ಶಿರಸಿ, ಯಲ್ಲಾಪುರ, ಹಳಿಯಾಳ ಈ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು
ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷಜೀ ಉದ್ಘಾಟಿಸಿದರು.
ಮೋದಿ ಹೆಸರಲ್ಲಿ ಮತ ಕೇಳಲು ಕಾರ್ಯಕರ್ತರಿಗೆ ಯಾವುದೇ ಸಂಕೋಚ ಹಾಗೂ ಅವಮಾನವಾಗುವುದಿಲ್ಲ, ಬದಲಾಗಿ ಹೆಮ್ಮೆ ಎನಿಸುತ್ತದೆ. ಈ ಐದು ವರ್ಷದಲ್ಲಿ ಕಾಶ್ಮೀರದ ಕಣಿವೆಯ ಹೊರತಾಗಿ ಬೇರೆಲ್ಲೂ ಬಾಂಬ್ ಸ್ಫೋಟ ಆಗಿಲ್ಲ, ಭಯೋತ್ಪಾದನೆ ಗಣನೀಯವಾಗಿ ಇಳಿಮುಖವಾಗಿದೆ, ದೇಶ ಸುರಕ್ಷಿತವಾಗಿದೆ, ರಕ್ಷಣಾ ವ್ಯವಸ್ಥೆ ಹಾಗೂ ಆರ್ಥಿಕ ವ್ಯವಸ್ಥೆ ಸುಧಾರಣೆ ಕಂಡಿದೆ. ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕೆಲಸವನ್ನು ಮೋದಿ ಸರ್ಕಾರ ಮಾಡಿದ್ದು, ಅವರೇ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷಜೀ ಇದೇ ಸಂದರ್ಭದಲ್ಲಿ ಹೇಳಿದರು.
ಐದು ವರ್ಷದ ಮೋದಿ ನಾಯಕತ್ವದ ಆಡಳಿತದಲ್ಲಿಯಾವುದೇ ಬೃಷ್ಟಾಚಾರವಿಲ್ಲ ಎಂಬುದನ್ನು ಹೆಮ್ಮೆಯಿಂದ ಹೇಳಬೇಕಾಗುತ್ತದೆ. ಐದು ವರ್ಷದಲ್ಲಿ ಏಳು ಕೋಟಿ ಮನೆಗಳಿಗೆ ಅಡುಗೆ ಅನಿಲ ವಿತರಣೆ, ಒಂಬತ್ತು ಕೋಟಿ ಮಬಗಳಿಗೆ ಶೌಚಾಲಯ, 35 ಸಾವಿರ ಕಿ.ಮಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸೇರಿದಂತೆ ಹಲವು ಜನಪರ ಕೆಲಸಮಾಡಿ ತೋರಿಸಿದ್ದಾರೆ ಎಂದರು.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಲಾಗದೇ ಕಾಂಗ್ರೆಸ್ ಮುಕ್ತ ಭಾರತಕ್ಕೆ ಮುನ್ನುಡಿ ಬರೆದಾಗಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ದೇವೇಗೌಡರು ಶೃಮಿಸುತ್ತಿದ್ದಾರೆ. ನಮ್ಮ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಕೇವಲ ಹಾಸನ, ಮಂಡ್ಯಕ್ಕೆ ಸೀಮಿತವಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ಸರ್ಕಾರ ಪತನವಾಗಲಿದೆ ಎಂದರು.
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿ, ಕೆ 70 ವರ್ಷದ ದಿಕ್ಕು ತಪ್ಪಿದ ರಾಜಕಾರಣದಿಂದಾಗಿ, ಜಾತಿ, ಹಣ, ಭಾಷೆ, ಗುಂಪಿನ ಹೆಸರಿನಲ್ಲಿ ರಾಜಕಾರಣ ಮಾಡುತ್ತ ಬಂದಿರುವ ಕಾಂಗ್ರೆಸ್‍ಗೆ ಇಂದು ಈ ದುರ್ಗತಿ ಬಂದಿದೆ. ಅಭಿವೃದ್ಧಿ ಕೇವಲ ಭೌತಿಕವಾಗಿದ್ದರೆ ಸಾಲದು, ಅದು ಸಾಮಾಜಿಕವಾಗಿ, ಆರ್ಥಿಕವಾಗಿ ಪರಂಪರೆ, ಸಂಸ್ಕøತಿಗೆ ಪೂರಕವಾಗಿ ಅಭಿವೃದ್ಧಿಯಾಗಬೇಕು. ಹಿಂದೆ ಜಾತಿ ಮತ್ತು ಹಣದ ಆಧಾರದ ಮೇಲೆ ಮತ ಕೇಳಲಾಗುತ್ತಿತ್ತು. ಆದರೆ ಇಂದು ದೇಶಕ್ಕೋಸ್ಕರ ಮತ ನೀಡಿ ಎನ್ನುವ ಮೇಲ್ಪಂಕ್ತಿ ಹಾಕಿಕೊಟ್ಟಿರುವುದೇ ಮೋದಿ ಆಡಳಿತದ ಹೆಚ್ಚುಗಾರಿಕೆಯಾಗಿದೆ ಎಂದರು.
ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜಿಬೈಲ್, ಚುನಾವಣಾ ಉಸ್ತುವಾರಿ ಲಿಂಗರಾಜ ಪಾಟೀಲ, ಶಾಸಕಿ ರೂಪಾಲಿ ನಾಯ್ಕ ಕಾರವಾರ, ಪ್ರಮುಖರಾದ ವಿನೋದ ಪ್ರಭು, ಎಂ.ಬಿ ಭಾನುಪ್ರಕಾಶ, ಮಾಜಿ ಶಾಸಕರಾದ ಸುನಿಲ ಹೆಗಡೆ ಹಳಿಯಾಳ, ಉಷಾ ಹೆಗಡೆ, ಶ್ರೀನಿವಾಸ ಭಟ್ಟ ಧಾತ್ರಿ, ಬಿಜೆಪಿ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಸೇರಿದಂತೆ ಇತರರು ಹಾಜರಿದ್ದರು.