ಕುಮಟಾ: ತಾಲೂಕಿನ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ಓದುತ್ತಿರುವ, ವಿದ್ಯಾರ್ಥಿ ಜೀವನದಿಂದಲೇ ಕಾವ್ಯ ಕೃಷಿಯಲ್ಲಿ ಸೃಜನಾತ್ಮಕವಾಗಿ ತೊಡಗಿಕೊಂಡ ಮೂವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಸನದಿ ಜನ್ಮದಿನ ಪ್ರತಿವರ್ಷ ಅಗಸ್ಟ್ 18 ರಂದು ಸನದಿ ಕಾವ್ಯ ಪ್ರಶಸ್ತಿ ಕೊಡಲು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಡಾ.ಬಿ.ಎ.ಸನದಿ ಸಾಹಿತ್ಯ ಸಂಘ ನಿರ್ಧರಿಸಿದೆ. ಪ್ರಶಸ್ತಿಯು ತಲಾ ರೂ. ಎರಡು ಸಾವಿರ ನಗದು, ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆಂದು ಸಂಘದ ಅಧ್ಯಕ್ಷ ಹಾಗೂ ಮುಖ್ಯಾಧ್ಯಾಪಕ ಎನ್.ಆರ್.ಗಜು ಇಂದಿಲ್ಲಿ ಹಮ್ಮಿಕೊಂಡ ‘ಸನದಿ ತಾತನಿಗೆ ಶ್ರದ್ಧಾಂಜಲಿ’ ಸಭೆಯಲ್ಲಿ ಪ್ರಕಟ ಪಡಿಸಿದರು. ಅವರು ಮಾತನಾಡುತ್ತಾ ಸನದಿಯವರು ಕುಮಟಾಕ್ಕೆ ಆಗಮಿಸಿದಂದಿನಿಂದ ಅವರ ಹೆಸರಲ್ಲಿ ಸಾಹಿತ್ಯ ಸಂಘ ರಚಿಸಿದ್ದಲ್ಲದೇ, ಅವರ ಜನ್ಮದಿನ, ಪುಸ್ತಕ ಬಿಡುಗಡೆ, ವಿದ್ಯಾರ್ಥಿ ಕವಿಗೋಷ್ಠಿಯೇ ಮೊದಲಾದ ಸಾಹಿತ್ಯ ಚಟುವಟಿಕೆಗಳನ್ನು ಅನವರತ ನಡೆಸಿಕೊಂಡು ಬರುತ್ತಿದ್ದು, ಅನೇಕ ಸಾಹಿತಿಗಳನ್ನು ವಿದ್ಯಾರ್ಥಿವೃಂದಕ್ಕೆ ಪರಿಚಯಿಸುತ್ತಾ ಬಂದಿರುವುದು ಅನುಕರಣ ೀಯವೂ ಹಾಗೂ ಅಧ್ಯಯನಯೋಗ್ಯವೂ ಆಗಿತ್ತು ಎಂದರು.

RELATED ARTICLES  ಹಿರಿಯ ಕಾಂಗ್ರೆಸ್ ಮುಖಂಡ ರಾಮನಾಥ ನಾಯ್ಕ ನಿಧನ


ಹಿರಿಯ ಕವಿ ಬೀರಣ್ಣ ನಾಯಕ ಹಿರೇಗುತ್ತಿ ತಮ್ಮ ಮತ್ತು ಸನದಿಯವರ ಒಡನಾಟ ಸ್ಮರಿಸಿಕೊಂಡು ಅವರ ಮಾನವೀಯ ಗುಣಗಳನ್ನು ಪ್ರಸ್ತಾಪಿಸಿದರಲ್ಲದೇ, ಸನದಿ ಕುರಿತು ಬರೆದು ಅವರೆದುರೇ ಓದಿ ಶಹಬ್ಬಾಸ್‍ಗಿಟ್ಟಿಸಿದ ಕವನವನ್ನು ಸೊಗಸಾಗಿ ಹಾಡಿದರು.


ಸನದಿಯವರ ಹೆರವಟ್ಟಾ ಮಿಲನ ಮನೆಯಂಗಳದ ತುಳಸಿ ಕಟ್ಟೆಯ ವೃತ್ತಾಂತವನ್ನು, ಅವರ ಅದಮ್ಯ ಜಾತ್ಯಾತೀತ ಮನೋಭಾವವನ್ನು ಸನದಿ ಕುಟುಂಬದ ಆಪ್ತ ಹಾಗೂ ರೋಟರಿಯ ನಿಯೋಜಿತ ಅಧ್ಯಕ್ಷ ಸುರೇಶ ಭಟ್ ತಮ್ಮ ಕಾವ್ಯಲಹರಿಯ ಮೂಲಕ ಸಾದರ ಪಡಿಸಿದರು.


ಚಿಂತಕ ಜಯದೇವ ಬಳಗಂಡಿ ದೀಪದ ಬುಡದಲ್ಲಿ ಹೇಗೆ ಕತ್ತಲೋ ಹಾಗೆಯೇ ಇಲ್ಲಿಯವರೇ ಆದ ನಾವೆಲ್ಲಾ ಅವರ ಕುರಿತು ಅರಿಯಬೇಕಾದದ್ದು ಬಹಳಷ್ಟಿವೆ. ಅವರ ಸಾಹಿತ್ಯ ಶಕ್ತಿಗೆ ತಾನು ದೊಡ್ಡ ನಮನ ಸಲ್ಲಿಸುವುದಾಗಿ ಹೇಳಿದರು.


ಹೇಗೆ ಆಕಾಶಕ್ಕೆ ಆಕಾಶವೇ, ಸಮುದ್ರಕ್ಕೆ ಸಮುದ್ರವೇ ಸರಿಸಾಟಿಯೋ ಹಾಗೆ ಸನದಿಯವರ ಕಾವ್ಯ ರಚನಾ ಸೌಂದರ್ಯಕ್ಕೆ ಸನದಿಯವರೇ ಸರಿಸಾಟಿ. ಅವರೊಂದು ಅನನ್ವಯ ಕವಿ ಎಂದು ಶಿಕ್ಷಕ ವಿಷ್ಣು ಭಟ್ಟ ಅಭಿಪ್ರಾಯಿಸಿ ನುಡಿಗೌರವ ಸಲ್ಲಿಸಿದರು.

RELATED ARTICLES  ರಾತ್ರಿ ನಾಟಕದ ಪಾತ್ರ ಮಾಡಿದ : ಬೆಳಗ್ಗೆ ದೇವರ ಪಾದ ಸೇರಿದ.


ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಅನಿಲ್ ರೊಡ್ರಿಗೀಸ್ ಉದಯೋನ್ಮುಖ ಸಾಹಿತಿಗಳಿಗೆ ಸದಾ ತೆರೆದಿರುತ್ತಿದ್ದ ಕುಮಟಾ ಇಂದು ಸಾಹಿತ್ಯಕವಾಗಿ ದೊಡ್ಡ ನಷ್ಟವನ್ನು ಹೊಂದಿ ಬಡವಾಗಿದೆ ಎಂದರು.


ತಾನು ಸಣ್ಣ ಪುಟ್ಟ ಪದ ಪುಂಜಗಳ ಸಲಹೆಗಳನ್ನು ಸಂಕೋಚದಿಂದ ಕೇಳಿದಾಗಲೂ ಬಹು ಆಸ್ಥೆಯಿಂದ ರಚಿಸಿ ಕೊಡುತ್ತಿದ್ದುದುದನ್ನು ಶಿಕ್ಷಕ ಭರತ್ ಭಟ್ ನೆನಪಿಸಿಕೊಂಡರು. ಹಳೆಯ ವಿದ್ಯಾರ್ಥಿನಿ ಐಶ್ವರ್ಯಾ ಶಾನಭಾಗ ಸನದಿ ಹಸ್ತಾಕ್ಷರ ಪಡೆದು ತಾನು ಧನ್ಯತೆಯಿಂದ ಸಂಭ್ರಮಿಸಿದ ಕ್ಷಣಗಳನ್ನು ನೆನಪಿಸಿಕೊಂಡರು. ವಿದ್ಯಾರ್ಥಿ ಪ್ರತಿನಿಧಿ ಮುಕ್ತಾ ಭಟ್ಟ ಸನದಿ ರಚಿತ ಕವನ ವಾಚಿಸಿದರು. ಸಂಘದ ಸಂಚಾಲಕ ಸುರೇಶ ಪೈ ಶಾಲೆಯೊಂದಿಗಿನ ಅವಿನಾಭಾವ ಸಂಬಂಧಗಳನ್ನು ಸ್ಮರಿಸುತ್ತಾ ನಿರೂಪಿಸಿದರು. ಶಿಕ್ಷಕರಾದ ಕಿರಣ ಪ್ರಭು, ಪ್ರದೀಪ ನಾಯ್ಕ, ಕೆ.ಅನ್ನಪೂರ್ಣ, ಬಿ.ನಾಗರತ್ನಾ, ಪ್ರಶಾಂತ ಗಾವಡಿ, ಸನದಿ ಅಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.