ಕಾರವಾರ :  ಚುನಾವಣಾ ಅಕ್ರಮಗಳನ್ನು ತಡೆಯಲು ಉತ್ತರ ಕನ್ನಡ ಜಿಲ್ಲಾಡಳಿತ ಮತ್ತಷ್ಟು ಕ್ರಮಗಳನ್ನು ಕೈಗೊಂಡಿದ್ದು ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಯವರ ಜತೆ ಮತ್ತಿಬ್ಬರು ಸಹಾಯಕ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಕೆ. ಆದೇಶಿಸಿದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಯಾಗಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್ ಅವರು ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿದ್ದು ಇವರೊಂದಿಗೆ ಮತ್ತಿಬ್ಬರು ಸಹಾಯಕ ನೋಡಲ್ ಅಧಿಕಾರಿಗಳಾಗಿ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀಕಾಂತ್‍ರಾವ್ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲಣ್ಕರ್ ಅವರನ್ನು ನಿಯೋಜಿಸಲಾಗಿದೆ.

ಕಾರವಾರ ನಗರಾಭಿವೃದ್ಧಿ ಕೋಶದ ಆಯುಕ್ತರಾದ ಶ್ರೀಕಾಂತ್‍ರಾವ್ ಅವರು ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳ ವಿಧಾನಸಭಾಕ್ಷೇತ್ರದ ಉಸ್ತುವಾರಿ ನೋಡಿಕೊಳ್ಳಲಿದ್ದು ಜಿಲ್ಲಾ ನಗರಾಭಿವೃದ್ಧಿ ಕ್ಷೇತ್ರದ ಯೋಜನಾ ನಿರ್ದೇಶಕ ವಿನಾಯಕ ಪಾಲಣ್ಕರ್ ಅವರು ಖಾನಾಪುರ, ಕಿತ್ತೂರು, ಹಳಿಯಾಳ, ಶಿರಸಿ, ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ನಿಯೋಜನೆಗೊಂಡಿದ್ದಾರೆ.

ಈ ಇಬ್ಬರೂ ಅಧಿಕಾರಿಗಳು ಸೂಚಿಸಿದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿದ ವಿಷಯಗಳ ಕುರಿತು ಕರ್ತವ್ಯ ನಿರ್ವಹಿಸಲಿದ್ದಾರೆ ಹಾಗೂ ನೋಡಲ್ ಅಧಿಕಾರಿಯವರಿಗೆ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ವರದಿ ಮಾಡಲಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.

RELATED ARTICLES  ಕೈಗಾದಲ್ಲಿ ಸ್ಥಾಪನೆಯಾಗಲಿದ ಮತ್ತೆರಡು ಉಷ್ಣ ವಿದ್ಯುತ್ ಘಟಕ.