ಕುಮಟಾ: ಕೈಗೆ ಕತ್ತಿ ಕೊಡುವವರು ಬೇಕೋ ಅಥವಾ ಉದ್ಯೋಗ ನೀಡುವವರು ಬೇಕೋ ಎನ್ನುವುದನ್ನು ಯುವಕರೇ ಯೋಚಿಸಬೇಕಿದೆ ಎಂದು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಪಕ್ಷದ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಮತ ಚಲಾಯಿಸುವಾಗ ಯುವಕರು ಯೋಚಿಸಬೇಕಿದೆ. ರಾಷ್ಟ್ರ ಮಟ್ಟದಲ್ಲಿ ನೋಡಬೇಡಿ. ಸ್ಥಳೀಯವಾಗಿ ಎಷ್ಟು ಅಭಿವೃದ್ಧಿ ಆಗಿದೆ, ಎಷ್ಟು ಜನರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ ಎನ್ನುವುದನ್ನು ಗಮನಿಸಿ. ಈ ನಿಟ್ಟಿನಲ್ಲಿ ಯುವಕರು ಬದಲಾಗಬೇಕಿದೆ ಎಂದು ತಿಳಿಸಿದರು.
23 ವರ್ಷ ಸಂಸದರಾದವರು ಮಾಡಿದ್ದು ಏನೂ ಇಲ್ಲ. ಯುವಕರ ಕೈಗೆ ಕತ್ತಿ ಕೊಟ್ಟು ರಾಜಕೀಯ ಮಾಡಿದರು. ಹಿಂದುಳಿದವರನ್ನು ಜೈಲಿಗೆ ಕಳುಹಿಸಿದರು. ಇದೇ ಅವರ ಸಾಧನೆ ಎಂದು ಕಿಡಿಕಾರಿದರು.
ಹಿಂದೂ ಮುಖಂಡ ಸೂರಜ್ ನಾಯ್ಕ ಸೋನಿ, ಜೆಡಿಎಸ್ ಹಿರಿಯ ಮುಖಂಡ ಪ್ರದೀಪ ನಾಯಕ ಹಾಗೂ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಯಾವ ರೀತಿ ಪ್ರಚಾರ ಕೈಗೊಳ್ಳಬೇಕೆಂಬ ಬಗ್ಗೆ ಜಂಟಿಯಾಗಿ ಸಭೆ ಕರೆದು ಚರ್ಚೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಏ.12ರಿಂದ ಇಲ್ಲಿ ಪ್ರಚಾರ ಶುರು ಮಾಡಲಿದ್ದೇವೆ. ಏ.18ರಂದು ಮತ್ತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕುಮಟಾಕ್ಕೆ ಬರಲಿದ್ದಾರೆ. ಇಲ್ಲಿನ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಭಿವೃದ್ಧಿಯ ಸೊಲ್ಲೆತ್ತದ ಅನಂತಕುಮಾರ ಹೆಗಡೆಯನ್ನು ಈ ಬಾರಿ ಯಾವುದೇ ಕಾರಣಕ್ಕೂ ಗೆಲ್ಲಲು ಬಿಡಬಾರದು ಎಂದರು.
ಈ ವೇಳೆ ಮಾಜಿ ಶಾಸಕಿ ಶಾರದಾ ಶೆಟ್ಟಿ, ಜೆಡಿಎಸ್ ಹಿರಿಯ ಮುಖಂಡ ಪ್ರದೀಪ ನಾಯಕ ದೇವರಬಾವಿ, ಹಿಂದೂ ಮುಖಂಡ ಸೂರಜ್ ನಾಯ್ಕ ಸೋನಿ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್‌ನಾಯ್ಕ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ತೆಂಗೇರಿ, ಜಿ.ಪಂ. ಸದಸ್ಯ ರತ್ನಾಕರ ನಾಯ್ಕ, ಭಾಸ್ಕರ ಪಟಗಾರ ಇದ್ದರು.