ಹೊನ್ನಾವರ: ಮೇ ಮೊದಲವಾರದಲ್ಲಿ ತಾಲೂಕಿನ ಮೂಡ್ಕಣಿಯಲ್ಲಿ ನಡೆಸಲು ಉದ್ದೇಶಿಸಲಾದ ಹೊನ್ನಾವರ ತಾಲೂಕಾ `9ನೇ ಕನ್ನಡ ಸಾಹಿತ್ಯ ಸಮ್ಮೇಳನ’ದ ಸರ್ವಾಧ್ಯಕ್ಷರಾಗಿ ನಿವೃತ್ತ ಕನ್ನಡ ಪ್ರಾಧ್ಯಾಪಕ, ಸಾಹಿತಿ ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಅವರು ಸರ್ವಾಧ್ಯಕ್ಷರಾಗಿ ಆಯ್ಕೆಯಾದರು.

ಕಸಾಪದ ಆಜೀವ ಸದಸ್ಯರ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಸ್ತಾಪ ಬಂದಾಗ ಪ್ರೊ. ಶ್ರೀಪಾದ ಹೆಗಡೆ ಕಣ್ಣಿ, ಮಂಜುಸುತ ಜಲವಳ್ಳಿ, ಡಾ.ಸುರೇಶ ನಾಯ್ಕ, ಮಾಧವಿ ಭಂಡಾರಿ ಇವರ ಹೆಸರುಗಳು ಪ್ರಸ್ತಾಪಿಸಲ್ಪಟ್ಟು, ಅಂತಿಮವಾಗಿ ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಅವರ ಹೆಸರನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎನ್.ಎಸ್.ಹೆಗಡೆ ಕೆರೆಕೋಣ, ಡಾ.ಎನ್.ಆರ್.ನಾಯಕ, ಕಸಾಪ ತಾಲೂಕಾಧ್ಯಕ್ಷ ನಾಗರಾಜ ಹೆಗಡೆ ಅಪಗಾಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸರ್ವಾಧ್ಯಕ್ಷರ ಪರಿಚಯ

ಶ್ರೀಪಾದ ಹೆಗಡೆ ಕಣ್ಣಿ ಅವರು ಜೂ.6ರ 1954 ರಂದು ತಾಲೂಕಿನ ಕಣ್ಣಿಮನೆಯಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ನಿರೊತ್ತಿಕೊಡ್ಲು, ಹಡಿನಬಾಳ ಶಾಲೆಯಲ್ಲಿ ಮುಗಿಸಿ, ಹೈಸ್ಕೂಲು ಶಿಕ್ಷಣವನ್ನು ಶ್ರೀ ಸುಬ್ರ್ಮಹ್ಮಣ್ಯ ಸಂಯುಕ್ತ ಪ್ರೌಢಶಾಲೆಯಲ್ಲಿ, ಪಿಯುಸಿ ವ್ಯಾಸಂಗವನ್ನು ಎಸ್‍ಕೆಪಿ ಅರೇಅಂಗಡಿಯಲ್ಲಿ, ಪದವಿಯನ್ನು ಎಸ್‍ಡಿಎಂ ಕಾಲೇಜಿನಲ್ಲಿ, ಸ್ನಾತಕೋತ್ತರ ಪದವಿಯನ್ನು ಕವಿವಿ ಧಾರವಾಡದಲ್ಲಿ ಮುಗಿಸಿದ್ದಾರೆ.
ಉಪಜೀವನಕ್ಕಾಗಿ ಕೆಲವುಕಾಲ ಮುದ್ರಣಾಲಯದಲ್ಲಿ ಉದ್ಯೋಗಿಯಾಗಿ, ಕಿಟಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಂತರ ಹೊನ್ನಾವರದ ಎಸ್‍ಡಿಎಂ ಪದವಿ ಕಾಲೇಜಿನಲ್ಲಿ 1988 ರಿಂದ 2014ರ ವರೆಗೆ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಆಸಕ್ತರಾಗಿದ್ದ ಇವರಿಗೆ ಪ್ರಾಭಾಕರ ಹೆಗಡೆ ಹೈಗುಂದ, ಪ್ರೊ.ಜಿನದೇವ ನಾಯಕ ಮೊದಲಾದವರು ಬರವಣಿಗೆಗೆ ಪ್ರೇರಣೆ ನೀಡಿದರು. ಇದುವರೆಗೆ ಬೆನ್ನಿಗೆ ಬಿದ್ದವರು, ಪಂಡಿನ ರಾಮಣ್ಣ, ಶಾಲೆಯ ಪದಗಳು, ಗುಡ್ಡದ ನವಿಲು, ನಡೆದಷ್ಟು ದೂರ ಮೊದಲಾದ ಕೃತಿಗಳು ಪ್ರಕಟವಾಗಿದ್ದು, ಇನ್ನೂ ಅನೇಕ ಕೃತಿಗಳು ಅಚ್ಚಿನ ಮನೆಯಲ್ಲಿವೆ.
ಕಣ್ಣಿ ಅವರು ಕಲಾಶೈಲವೆಂಬ ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ಸಂಸ್ಥೆಯನ್ನು ಹುಟ್ಟುಹಾಕಿ ತಮ್ಮ ಆತ್ಮೀಯ ಬಳಗದೊಂದಿಗೆ ಅನೇಕ ವರ್ಷಗಳ ಕಾಲ ಮುನ್ನಡೆಸಿದ್ದಾರೆ. ಕನ್ನಡ ಸಾಹಿತ್ಯದ ವ್ಯಾಪಕ ಓದು, ಅಧ್ಯಯನ, ಅಧ್ಯಾಪನದೊಂದಿಗೆ ಅನೇಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಪ್ರೀತಿ ಮೂಡಿಸಿದ್ದಾರೆ. ಮನೆಯಲ್ಲಿಯೇ ಬೃಹತ್ ಗ್ರಂಥ ಭಂಡಾರ ನಿರ್ಮಿಸಿದ್ದು, ಓದುಗರ ಅಭಿರುಚಿಗೆ ತಕ್ಕಂತೆ ಉಚಿತವಾಗಿ ಗ್ರಂಥಗಳನ್ನು ನೀಡಿ ಪುಸ್ತಕ ಪ್ರೀತಿಯನ್ನು ಬೆಳೆಸುತ್ತಿದ್ದಾರೆ. ಕಾಲೇಜಿನ ಕನ್ನಡ ಸಂಘದಲ್ಲಿ ವಿದ್ಯಾರ್ಥಿಗಳನ್ನು ಸಕ್ರೀಯವಾಗಿ ತೊಡಗಿಸಿ ಉತ್ತಮ ಬದುಕು, ಬರಹಗಳತ್ತ ಹೊಸತಲೆಮಾರನ್ನು ಸೆಳೆಯುವಲ್ಲಿ ಶ್ರಮಿಸುತ್ತಾ ಬಂದಿದ್ದಾರೆ. ಕಣ್ಣಿ ಅವರ ಮಡದಿ ಜಯಶ್ರೀ ಹೆಗಡೆ ಕಣ್ಣಿ ಅವರು ಕೂಡ ಕವಯತ್ರಿಯಾಗಿ, ಪ್ರಬಂಧಕಾರರಾಗಿ, ರಂಗಭೂಮಿ ಕಲಾವಿದರಾಗಿ ಮೈಸೂರಿನಲ್ಲಿ ಸೇವೆಸಲ್ಲಿಸುತ್ತಿದ್ದರೆ. ಮಕ್ಕಳಾದ ಡಾ.ಚೈತ್ರಾ ಅವರು ವಿಜ್ಞಾನಿಯಾಗಿ, ಸುಧಾಂಶು ಚಿತ್ರಕಲಾವಿದರಾಗಿ, ಛಾಯಾಚಿತ್ರಗ್ರಾಹಕರಾಗಿ ಹೆಸರು ಮಾಡಿದ್ದಾರೆ.

RELATED ARTICLES  ಕುಮಟಾದ ಅಬಾಕಸ್ ಮೆಮೊರಿ ಕ್ಲಾಸ್ ವಿದ್ಯಾರ್ಥಿಗಳ ಸಾಧನೆ.