ಘಮ ಘಮ ಎಂದು ಪರಿಮಳ ಬೀರುವ, ಸವಿಯಾದ ಹಲಸಿನ ಹಣ್ಣೆಂದರೆ ಎಲ್ಲರಿಗೂ ಇಷ್ಟ. ಅದೇ ಹಲಸಿನ ಹಣ್ಣು ಎಳೇ ಕಾಯಿಯಾಗಿರುವಾಗ ಅದನ್ನು ತಂದು ಮಾಡುವ ಪಲ್ಯವೂ ಅಷ್ಟೇ ರುಚಿಕರ. ಮಲೆನಾಡಿನಲ್ಲಿ ಸಾಮಾನ್ಯವಾಗಿ ಮಾಡುವ ಸ್ವಾದಿಷ್ಟವಾದ ಪಲ್ಯವಿದು. ಅನ್ನಕ್ಕೆ ಹಾಕಿ ಕಲಸಿಕೊಂಡು ತಿನ್ನಲು ಬಹಳ ಸೊಗಸಾಗಿರುತ್ತದೆ. ಬನ್ನಿ ನೋಡೋಣ ಇದನ್ನು ಹೇಗೆ ಮಾಡುವುದೆಂದು.

ಬೇಕಾಗುವ ಪದಾರ್ಥಗಳು:

ಹಲಸಿನ ಕಾಯಿ: 1

ತೆಂಗಿನ ತುರಿ- ಒಂದು ಸಣ್ಣ ಹೋಳು

ಬ್ಯಾಡಗಿ ಮೆಣಸಿನಕಾಯಿ- 7-8

ಕರಿಬೇವಿನ ಸೊಪ್ಪು- 5-6 ಎಲೆಗಳು

ಎಣ್ಣೆ- 3-4 ಚಮಚ

ನಿಂಬೆ ಹಣ್ಣು- ಒಂದು ಹೋಳು

ಕಡಲೆಬೇಳೆ- ಕಾಲು ಚಮಚ

ಉದ್ದಿನಬೇಳೆ- ಕಾಲು ಚಮಚ

ಸಾಸಿವೆ ಕಾಳು- ಅರ್ಧ ಚಮಚ

ಅರಿಶಿನ- ಸ್ವಲ್ಪ

ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲು ಹಲಸಿನಕಾಯಿಯನ್ನು ಚೆನ್ನಾಗಿ ತೊಳೆದು, ಮೇಲಿನ ಹಸಿರು ಬಣ್ಣದ ಮುಳ್ಳನ್ನು ಕತ್ತರಿಸಿ ತೆಗೆದು ಹಾಕಿ. ಈಗ ಒಳಗಿರುವ ಭಾಗದಲ್ಲಿ ಮೇಲ್ಪದರದಲ್ಲಿ ಸಿಗುವ ಭಾಗವನ್ನು ಉದ್ದುದ್ದನೆ ಸೀಳು ಮಾಡಿ.

RELATED ARTICLES  ಬಿಸಿ-ಬಿಸಿ, ರುಚಿ-ರುಚಿ ಆಲೂ ಪರೋಟಾ!

ನಂತರ ಅದನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಹೀಗೆ ಕತ್ತರಿಸಿದ ಹೋಳುಗಳನ್ನು ಕುಕ್ಕರ್ ನಲ್ಲಿಟ್ಟು ಎರಡು ವಿಷಲ್ ಕೂಗುವಂತೆ ಬೇಯಿಸಿಕೊಳ್ಳಿ.

ತೆಂಗಿನತುರಿ, ಬ್ಯಾಡಗಿ ಮೆಣಸಿನಕಾಯಿ, ಸಾಸಿವೆ ಕಾಳು ಇಷ್ಟನ್ನೂ ಮಿಕ್ಸರ್ ಜಾರ್ ಗೆ ಹಾಕಿಕೊಂಡು ನೀರು ಸೇರಿಸದೆ ರುಬ್ಬಿಕೊಳ್ಳಿ.

ಗ ಸ್ಟವ್ ಹೊತ್ತಿಸಿ, ಫ್ರೈಯಿಂಗ್ ಪ್ಯಾನ್ ಇಟ್ಟು ಎಣ್ಣೆ ಹಾಕಿ. ಅದು ಕಾದಾಗ ಕಡಲೆಬೇಳೆ, ಉದ್ದಿನ ಬೇಳೆ, ಸಾಸಿವೆಕಾಳು ಹಾಕಿ. ಸಿಡಿದಾಗ ಸಣ್ಣಗೆ ಹೆಚ್ಚಿಟ್ಟ ಕರಿಬೇವಿನ ಸೊಪ್ಪನ್ನು ಹಾಕಿ, ಮಿಕ್ಸರ್ ಗೆ ಹಾಕಿದ ಮಸಾಲೆಯನ್ನೂ, ಸ್ವಲ್ಪ ಉಪ್ಪನ್ನೂ, ಅರಿಶಿನವನ್ನೂ ಹಾಕಿ ಸಣ್ಣ ಉರಿಯಲ್ಲಿ ಒಂದೆರಡು ನಿಮಿಷಗಳ ಕಾಲ ಹುರಿಯಿರಿ.

ಈಗ ಕುಕ್ಕರ್ ನಿಂದ ತೆಗೆದ, ಬೆಂದಿರುವ ಹಲಸಿನಕಾಯಿಯ ಸಣ್ಣ ಹೋಳುಗಳನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕೈ ಮಗುಚಿ. ಉರಿ ಹಾಗೇ ಸಣ್ಣಗಿರಲಿ. ಹೋಳು, ಮಸಾಲೆ ಪದಾರ್ಥಗಳೆಲ್ಲಾ ಒಟ್ಟಾಗಲಿ. ಮತ್ತೆ ನಾಲ್ಕೈದು ನಿಮಿಷಗಳ ನಂತರ ನಿಂಬೆರಸವನ್ನು ಹಾಕಿ ಮತ್ತೊಮ್ಮೆ ಕೈ ಮಗುಚಿ ಸ್ಟವ್ ಆರಿಸಿ. ರುಚಿಕರವಾದ ಹಲಸಿನ ಕಾಯಿಯ ಪಲ್ಯ ಸವಿಯಲು ಸಿದ್ಧ. ಅನ್ನಕ್ಕೆ ಹಾಕಿ ಕಲಸಿಕೊಂಡು, ಕೊಬ್ಬರಿ ಎಣ್ಣೆಯನ್ನು ಹಾಕಿಕೊಂಡು ತಿನ್ನಲು ಬಲು ರುಚಿಯಾಗಿರುತ್ತದೆ.

RELATED ARTICLES  ಡ್ರೈ ಗುಲಾಬ್ ಜಾಮೂನ್

ಟಿಪ್ಸ್:

1.ಹಲಸಿನ ಕಾಯಿಯನ್ನು ಹೆಚ್ಚುವ ಮುನ್ನ ಕೈಗೆ ಎಣ್ಣೆಯನ್ನು ಸವರಿಕೊಳ್ಳಲು ಮರೆಯದಿರಿ ಮತ್ತೆ.

2. ಕುಕ್ಕರ್ ನಲ್ಲಿ ಬೇಯಿಸಲು ಇಡುವ ಪಾತ್ರೆಗೂ ಸ್ವಲ್ಪ ಎಣ್ಣೆ ಸವರಿದರೆ, ಪಾತ್ರೆಗೆ ಹೋಳಿನ ಅಂಟು ಹಿಡಿಯುವುದಿಲ್ಲ.

3. ಒಂದು ಹಿಡಿಯಷ್ಟು ಮೊದಲೇ ನೆನೆಸಿಟ್ಟುಕೊಂಡ ಕಡಲೆಕಾಳುಗಳನ್ನೂ ಸಹ ಈ ಪಲ್ಯಕ್ಕೆ ಉಪಯೋಗಿಸಬಹುದು. ಕುಕ್ಕರ್ ನಲ್ಲಿ ಹೋಳುಗಳನ್ನು ಬೇಯಿಸಲು ಇಡುವಾಗ ನೆನೆಸಿಟ್ಟ ಕಾಳುಗಳನ್ನೂ ಸೇರಿಸಿ ಬೇಯಿಸಿದರಾಯಿತು.