ಕುಮಟಾ : ವಿನಾಯಕ ಬ್ರಹ್ಮೂರು ನಿರ್ದೇಶನದ ಆಚೆ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದ್ದು ಚಿತ್ರತಂಡ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದೆ. ಟ್ಯಾಲೆಂಟ್ ಹಂಟ್ ಅವಾರ್ಡ್ ಎಂಬ ಕಾರ್ಯಕ್ರಮದ ಮೂಲಕ ಸದ್ದು ಮಾಡ್ತಿದೆ. ಚಿತ್ರ ಸೆಟ್ಟೇರಿದಾಗಿಂದ ಒಂದಿಲ್ಲೊಂದು ಕಾರಣದಿಂದ ಸುದ್ದಿಯಾಗುತ್ತಿದ್ದು ಇದೀಗ ಮತ್ತೊಂದು ರೀತಿಯಲ್ಲಿ ಜನಮನವನ್ನು ಸೆಳೆಯುತ್ತಿದೆ.
ಬ್ರಹ್ಮ ಕ್ರಿಯೇಶನ್ಸ್‍ನಡಿಯಲ್ಲಿ ನಿರ್ಮಾಣಗೊಂಡಿರುವ ಆಚೆ ಸಿನಿಮಾ ಆಯೋಜಿಸಿರುವ ಟ್ಯಾಲೆಂಟ್ ಹಂಟ್ ಅವಾರ್ಡ್ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರತಿಭೆಗಳಿಗೆ ಸೂಕ್ತ ವೇದಿಕೆ ನೀಡುವ ಮೂಲಕ ಪ್ರತಿಭಾನ್ವೇಷಣೆಯ ಮಹತ್ವಪೂರ್ಣ ಹೆಜ್ಜೆಯನ್ನಿಟ್ಟಿದೆ. ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ಮಧ್ಯ ವಯಸ್ಕರವರೆಗೂ ಮುಕ್ತವಾಗಿ ಭಾಗವಹಿಸುವ ಅವಕಾಶ ಈ ಸ್ಪರ್ಧಾ ಕಾರ್ಯಕ್ರಮದಲ್ಲಿದೆ.
ಜಿಲ್ಲೆಯಲ್ಲೇ ಮೊದಲು : ಆಚೆ ಕಥಾ ಸ್ಪರ್ಧೆ, ಆಚೆ ಬೆಸ್ಟ್ ಸಿಂಗರ್ ಅವಾರ್ಡ್, ಆಚೆ ಸ್ಮಾರ್ಟ್ ಪುಟಾಣಿ ಅವಾರ್ಡ್, ಆಚೆ ಬೆಸ್ಟ್ ಡಬ್‍ಸ್ಮಾಶ್ ಅವಾರ್ಡ್, ಆಚೆ ಕ್ಯೂಟ್ ಕಪಲ್ಸ್ ಅವಾರ್ಡ್, ಆಚೆ ಬೆಸ್ಟ್ ಮೊಬೈಲ್ ಫೋಟೋಗ್ರಫಿ ಅವಾರ್ಡ್, ಆಚೆ ಬೆಸ್ಟ್ ಆ್ಯಕ್ಟಿಂಗ್ ಅವಾರ್ಡ್ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿಭಿನ್ನ ಮಾದರಿಯನ್ನು ಹೊಂದಿರುವ ಇಂಥದ್ದೊಂದು ಸ್ಪರ್ಧೆ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ವಿಶಿಷ್ಠವಾಗಿ ನಡೆಯುತ್ತಿದೆ. ಹವ್ಯಾಸಿ ಕಲಾವಿದರಿಗೂ ಇದು ಉತ್ತಮ ವೇದಿಕೆ ಎನಿಸಿದೆ.
ಸ್ಪರ್ಧೆ ನಡೆಯುವುದೇಗೆ? : ಪ್ರತಿಯೊಂದು ಸ್ಪರ್ಧೆಗಳಿಗೂ ಅದರದ್ದೇ ಆದ ನಿಯಮಗಳಿದ್ದು “ಆಚೆ ಟ್ಯಾಲೆಂಟ್ ಹಂಟ್” ಎಂಬ ಫೇಸ್‍ಬುಕ್ ಪೇಜಿನಲ್ಲಿ ಸ್ಪರ್ಧೆಯ ಸಂಪೂರ್ಣ ಮಾಹಿತಿ ಲಭಿಸಲಿದೆ. ನೀವು ಕುಳಿತ ಜಾಗದಿಂದಲೇ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು ಆಯೋಜಕರು ನೀಡಿದ ಮೇಲ್ ಐಡಿ ಅಥವಾ ವಾಟ್ಸಾಪ್ ನಂಬರಿಗೆ ಕಳುಹಿಸಬೇಕು. ಪ್ರತಿ ಸ್ಪರ್ಧೆಗಳಿಗೂ ತಲಾ 5 ಜನ ನಿರ್ಣಾಯಕರಿದ್ದು ಅವರು ನೀಡುವ ಅಂಕದ ಮೇಲೆ ವಿಜೇತರಿಗೆ ಅವಾರ್ಡ್ ಲಭಿಸುತ್ತದೆ. ಚಿತ್ರ ಬಿಡುಗಡೆಯ ದಿನದಂದು ಗಣ್ಯರಿಂದ ವಿಜೇತರಿಗೆ ಬಹುಮಾನ ಹಾಗೂ ಸರ್ಟಿಫಿಕೇಟ್ ನೀಡಲಾಗುತ್ತದೆ.
ಸ್ಟೋರಿ ಎಬೌಟ್ ಲೈಫ್ ಆಫ್ಟರ್ ಡೆತ್ ಎಂಬ ಅಡಿಬರಹದಲ್ಲಿ ಮೂಡಿ ಬರುತ್ತಿರುವ ಆಚೆ ಚಿತ್ರದ ಮೇಲೆ ತುಂಬಾ ನಿರೀಕ್ಷೆಯಿದ್ದು ನಮ್ಮ ಚಿತ್ರದ ಮೂಲಕ ಜಿಲ್ಲೆಯ ಹಲವು ಪ್ರತಿಭೆಗಳಿಗೆ ಒಂದು ವೇದಿಕೆ ಮಾಡಿಕೊಡುವ ನಿಟ್ಟಿನಲ್ಲಿ ಟ್ಯಾಲೆಂಟ್ ಹಂಟ್ ಅವಾರ್ಡ್ ಆಯೋಜಿಸಿದ್ದೇವೆ. ಸ್ಪರ್ಧೆಯಲ್ಲಿ ಯಾವುದೇ ಥರದ ವಿವಾದವಾಗದಂತೆ ಅಚ್ಚುಕಟ್ಟಾಗಿ ನಿರೂಪಿಸಲಾಗಿದ್ದು ಸ್ಪರ್ಧಿಗಳ ಅವಧಿ ಮುಗಿದ ಮೇಲೆಯೇ ನಿರ್ಣಾಯಕರ ಹೆಸರನ್ನು ಬಹಿರಂಗಪಡಿಸುತ್ತೇವೆ. ಹಾಗೆಯೇ ಚಿತ್ರ ಬಿಡುಗಡೆಯ ದಿನದಂದು ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳನ್ನೂ ಪರದೆ ಮೇಲೆ ತೋರಿಸಲಿದ್ದೇವೆ. ನಮ್ಮ ಹೊಸ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಇರಲಿ
– ವಿನಾಯಕ ಬ್ರಹ್ಮೂರು, ಆಚೆ ಚಿತ್ರದ ನಿರ್ದೇಶಕರು