ಬೆಂಗಳೂರು: ರಾಜಕೀಯ ಅಭ್ಯರ್ಥಿಗಳು ಮತದಾರರಿಗೆ ಮದ್ಯ ಮತ್ತು ಹಣದ ಹೊಳೆ ಹರಿಸುತ್ತಿರುವ ನಡುವೆಯೇ ರಾಜ್ಯದಲ್ಲಿ ಅಬಕಾರಿ ಇಲಾಖೆಯ ಷರತ್ತುಗಳನ್ನು ಉಲ್ಲಂಘಿಸಿದ 700 ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ.
ಪ್ರತಿ ಜಿಲ್ಲೆಯಲ್ಲಿ ಸರಾಸರಿ ಆಂದಾಜು 25ರಿಂದ 30 ಮದ್ಯದಂಗಡಿಗಳು ಬಂದ್ ಆಗಿದ್ದು, 15 ದಿನ ಬಾಗಿಲು ತೆರೆಯುವಂತಿಲ್ಲ. ಒಂದು ವೇಳೆ ಬಾಗಿಲು ತೆರೆದರೆ ಅಂಥ ಮದ್ಯದಂಗಡಿ ಪರವಾನಗಿ ರದ್ದುಗೊಳಿಸು ವುದಾಗಿ ಅಬಕಾರಿ ಇಲಾಖೆ ಎಚ್ಚರಿಕೆ ನೀಡಿದೆ.
ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸುವ ಉದ್ದೇಶದಿಂದ ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಲ್ಲಿದೆ. ಆದರೂ ಕೆಲವು ಮದ್ಯದಂಗಡಿಗಳು ಇಲಾಖೆಯ ಸನ್ನದು ಉಲ್ಲಂಘಿಸಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಮಾರಾಟ ಮಾಡುತ್ತಿವೆ. ತಡರಾತ್ರಿವರೆಗೂ ಮುಚ್ಚದೆ ವ್ಯಾಪಾರ ನಡೆಸುತ್ತಿವೆ. ಈ ಬಗ್ಗೆ ಇಲಾಖೆಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ರಾಜ್ಯಾದ್ಯಂತ ಮದ್ಯದಂಗಡಿಗಳ ಮೇಲೆ ದಾಳಿ ನಡೆಸಿ ನಿಯಮ ಉಲ್ಲಂಘಿಸಿದ್ದ ಮಾಲೀಕರಿಗೆ 5ರಿಂದ 50 ಸಾವಿರ ರೂ.ವರೆಗೆ ದಂಡ ವಿಧಿಸಿದ್ದಾರೆ.
700 ಮದ್ಯದಂಗಡಿಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ. ಮತದಾರರನ್ನು ಮದ್ಯದ ಹೊಳೆಯಲ್ಲೇ ಮುಳುಗಿಸಿ ಅವರನ್ನು ತಮ್ಮತ್ತ ಸೆಳೆಯುವ ಪ್ರಯತ್ನಕ್ಕೆ ತುಸು ಹಿನ್ನೆಡೆಯುಂಟಾಗಿದೆ. ಮತದಾರರನ್ನು ಸೆಳೆಯುವ ರಾಜಕೀಯ ಪಕ್ಷಗಳ ಒಳದಾರಿಗೆ ಬೇಲಿ ಹಾಕುತ್ತಿರುವ ಚುನಾವಣೆ ಆಯೋಗ ನಿಷ್ಪಕ್ಷಪಾತ ಚುನಾವಣೆ ನಡೆಸಲು ಕ್ರಮ ಕೈಗೊಂಡಿದೆ.
ರಾಜ್ಯಾದ್ಯಂತ ಅಕ್ರಮ ಮದ್ಯದ ಸಾಗಣೆ ಮೇಲೆ ಹದ್ದಿನ ಕಣ್ಣಿಟ್ಟಿರುವ ಅಬಕಾರಿ ಇಲಾಖೆ ಏ.16ವರೆಗೆ 36 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯ ಜಪ್ತಿ ಮಾಡಿದೆ. ಇದರಲ್ಲಿ 31 ಕೋಟಿ ರೂ. ಮೌಲ್ಯದ 5.4 ಲಕ್ಷ ಲೀ. ಮದ್ಯ ಮತ್ತು 5 ಕೋಟಿ ರೂ. ಮೌಲ್ಯದ 2.8 ಲಕ್ಷ ಲೀ. ಬಿಯರ್ ವಶಪಡಿಸಿಕೊಳ್ಳಲಾಗಿದೆ. ಷರತ್ತುಗಳನ್ನು ಉಲ್ಲಂಘಿಸಿದ 3,510 ಮದ್ಯದಂಗಡಿಗಳ ವಿರುದ್ಧ ಪ್ರಕರಣ ದಾಖಲಾಗಿವೆ.
Source: VKKannada