ಕುಮಟಾ: ದಿ. ಡಾ.ಬಿ.ಎ.ಸನದಿ ವಿರಚಿತ ಮತ್ತು ಅವರಿಗೆ ಸಂದ ಹಾಗೂ ಉಡುಗೊರೆಯಾಗಿ ಬಂದ ಸಹಸ್ರ ಸಹಸ್ರ ಸಂಗ್ರಹಿತ ಪುಸ್ತಕಗಳು, ಆಕರ ಗ್ರಂಥಗಳು, ಪ್ರಶಸ್ತಿ ಫಲಕಗಳು ಮುಂಬರುವ ಪೀಳಿಗೆಗೆ ಉಪಯುಕ್ತವಾಗಬೇಕೆಂಬ ಸದುದ್ದೇಶದಿಂದ ಅವರ ಪತ್ನಿ ನಜೀರಾ ಸನದಿ, ಮಗ ನಿಸಾರ್ ಸನದಿ, ಮಗಳು ಆಯಿಷಾ ಮತ್ತು ಮೊಮ್ಮಗ ಸಾಹಿರ್ ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಸನದಿ ಸಾಹಿತ್ಯ ಸಂಘದ ಪದಾಧಿಕಾರಿಗಳೊಂದಿಗೆ ಮಾತನಾಡಿದರು. ಶಾಲೆಯ ಗ್ರಂಥಾಲಯದಲ್ಲಿ ‘ಸನದಿ ಬುಕ್ ಕಾರ್ನರ್’ ಸ್ಥಾಪಿಸಿ ಎಲ್ಲ ಸಹೃದಯೀ ಸಾಹಿತ್ಯಾಸಕ್ತರಿಗೆ, ಅಧ್ಯಯನಶೀಲರಿಗೆ ಪುಸ್ತಕಗಳು ಕೈಗೆಟಕುವಂತೆ ಮುಕ್ತ ಅವಕಾಶ ಕಲ್ಪಿಸಲು ಅನುಮತಿ ಕೋರಿದರು.
ತನ್ನ ಪತಿ ಕುಮಟಾದ ಮ.ಗಾಂ.ಪ್ರೌಢಶಾಲೆಯೊಂದಿಗೆ ಅವಿನಾಭಾವ ಸಂಬಂಧಹೊಂದಿದ್ದು, ತಾನು ಎಲ್ಲ ಪುಸ್ತಕಗಳನ್ನು ಶಾಲೆಯ ಗ್ರಂಥಾಲಯಕ್ಕೆ ನೀಡುವುದಾಗಿ ಆಗಾಗ ಹೇಳಿಕೊಳ್ಳುತ್ತಿದ್ದರಲ್ಲದೇ ಈ ಹಿಂದೆ ಸಾಕಷ್ಟು ಪುಸ್ತಕಗಳನ್ನು ನೀಡಿದ್ದಾರೆ ಎಂದರು. ಅವರ ಮನದಿಚ್ಛೆಯನ್ನು ಪೂರೈಸಲು ಶಾಲೆಯ ಮುಖ್ಯಾಧ್ಯಾಪಕ ಎನ್.ಆರ್.ಗಜು, ಸನದಿ ಸಂಘದ ಸಂಚಾಲಕ ಶಿಕ್ಷಕ ಸುರೇಶ ಪೈ, ಶಿಕ್ಷಕ ಕಿರಣ ಪ್ರಭು, ಪ್ರಶಾಂತ ಗಾವಡಿ ಮತ್ತು ಸಂಘದ ವಿದ್ಯಾರ್ಥಿ ಪದಾಧಿಕಾರಿಗಳು ಮನೆಗೆ ಆಸಕ್ತಿಯಿಂದ ಆಗಮಿಸಿದ್ದರು. ಬಹುಸಂಖ್ಯೆಯ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ಸೇರ್ಪಡೆಗೊಳಿಸಲು ಹಾಗೂ ಸನದಿ ಬುಕ್ ಕಾರ್ನರ್ ಸ್ಥಾಪಿಸಲು ಮುಮ್ಮೊದಲ ಚಾಲನೆ ನೀಡಿದರು. ಸನದಿ ನಿಕಟವರ್ತಿ ಚುಟುಕು ಕವಿ ಬೀರಣ್ಣ ನಾಯಕ ಹಿರೇಗುತ್ತಿ ಸನದಿ ಸಂಘವನ್ನು ಬಲಯುತಗೊಳಿಸಿ ಸನದಿ ಹೆಸರನ್ನು ಚಿರಸ್ಥಾಯಿಯಾಗಿಸುವ ಕಾರ್ಯಕ್ಕೆ ಸಹಕರಿಸುವ ಭರವಸೆ ನೀಡಿದರು. ರೋಟರಿ ನಿಯೋಜಿತ ಅಧ್ಯಕ್ಷ ಸುರೇಶ ಭಟ್ಟ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸನದಿ ಜನ್ಮದಿನ ಅಗಷ್ಟ ೧೮ ರಂದು ರೋಟರಿಯ ನಾದಶ್ರಿ ಕಲಾಕೇಂದ್ರದಲ್ಲೂ ಸಾಹಿತ್ಯಕ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಸನದಿ ಸಂಘದ ಸಂಚಾಲಕ ಸುರೇಶ ಪೈ ಸನದಿ ಬುಕ್ ಕಾರ್ನರ್ ವಿದ್ಯಾರ್ಥಿಗಳಿಗಷ್ಟೆ ಅಲ್ಲದೇ ಸಾರ್ವಜನಿಕರಿಗೂ ಪ್ರವೇಶವಿರುತ್ತದೆ ಎಂದರಲ್ಲದೇ ಪ್ರತಿವರ್ಷ ಶಾಲೆಯಲ್ಲಿ ತಾಲೂಕಾ ಮಟ್ಟದ ‘ಸನದಿ ವಿದ್ಯಾರ್ಥಿ ಕಾವ್ಯ ಪ್ರಶಸ್ತಿ’ ನೀಡುವುದಾಗಿ ಘೋಷಿಸಿರುವುದನ್ನು ಸ್ಮರಿಸಿದರು. ಸಂಘದ ಕಾರ್ಯಚಟುವಟಿಕೆಗಳನ್ನು ನಿವೃತ್ತ ಮುಖ್ಯಾಧ್ಯಾಪಕಿ ನೀರಜಾ ನಾಯಕ, ಸಾಹಿತಿ ಕೃಷ್ಣ ನಾಯಕ ಹಿಚ್ಕಡ, ರಂಗಕರ್ಮಿ ಕಿರಣ ಭಟ್ ಮೊದಲಾದವರು ವಿಶೇಷವಾಗಿ ಅಭಿನಂದಿಸಿದನ್ನು ಸಂಘದ ಅಧ್ಯಕ್ಷ ಎನ್.ಆರ್.ಗಜು ನೆನಪಿಸಿಕೊಂಡರು.