ಗೋಕರ್ಣ: ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ರೂಢಿಗತ ಪರಂಪರೆಯಂತೆ ವಿಕಾರಿ ಸಂವತ್ಸರದ ‘ ಕಾಮಾಘನಾಶಿನಿ ಸಂದರ್ಶನೋತ್ಸವ ಮತ್ತು’ ‘ಆನಂಗ ತ್ರಯೋದಶಿ’ (ಸುಗ್ಗಿ ಉತ್ಸವ ) ಸಂಪನ್ನಗೊಂಡಿತು .
ದಿ 17-04-2019 ಬುಧವಾರ ಮುಂಜಾನೆ ಅಘನಾಶಿನಿ ನದಿಗೆ ಪೂಜೆ ಸಲ್ಲಿಸಿ, ಸಂಕಲ್ಪಸ್ನಾನ ಪೂರೈಸಿದ ನಂತರ ಉತ್ಸವವು ತದಡಿಯ ಶ್ರೀ ಅಶ್ವಥಗಣಪತಿ ದೇವಾಲಯದಲ್ಲಿ ಕುಳಿತು ಹಣ್ಣುಕಾಯಿ ಸಮರ್ಪಣೆ, ಪೂಜೆ ಸ್ವೀಕರಿಸಿ ಶ್ರೀ ದೇವಾಲಯಕ್ಕೆ ಮರಳಿತು .
ದಿ 17-04-2019 ಬುಧವಾರ ರಾತ್ರಿ ಶ್ರೀ ದೇವರ ಉತ್ಸವದ ಮುಂದುಗಡೆ ಸಾಂಪ್ರದಾಯಿಕ ಅಲಂಕೃತ ಸುಗ್ಗಿ ಕುಣಿಯುತ್ತ ಸಾಗಿತು . ಸ್ಥಳೀಯ ಹುಳಸೆಕೇರಿ ಹಾಲಕ್ಕಿ ಪಂಗಡದವರಿಂದ ಸುಗ್ಗಿ ಕುಣಿತ ಸೇವೆ ಜರುಗಿತು . ಶ್ರೀ ದೇವಾಲಯದಿಂದ ರಥಬೀದಿಯ ಮೂಲಕ ಸಾಗುವ ಉತ್ಸವವು ಕೋಟಿತೀರ್ಥದ ಪಟ್ಟವಿನಾಯಕ ದೇವಾಲಯಕ್ಕೆ ತೆರಳುತ್ತದೆ . ಅಲ್ಲಿ ಧಾರ್ಮಿಕ ಕೈಂಕರ್ಯ ಪೂರೈಸಿ ಸುಗ್ಗಿಯ ಕುಣಿತದ ಜೊತೆ ಉತ್ಸವವು ಶ್ರೀ ಮಹಾಗಣಪತಿ ದೇವಾಲಯಕ್ಕೆ ಆಗಮಿಸುತ್ತದೆ . ಅಲ್ಲಿ ಕಾಮದಹನ ಕಾರ್ಯಕ್ರಮ ಪೂರೈಸುವ ಮೂಲಕ ಉತ್ಸವ ಮಂಗಲವಾಯಿತು .