ಸಾತ್ವಿಕನೇ ಹೌದು ಆತ. ಪ್ರತಿಭಾನ್ವಿತ ಶಿಕ್ಷಕ ದಂಪತಿಗಳಾದ ಶ್ರೀಯುತ ನಾರಾಯಣ ಭಾಗವತ ಮತ್ತು ಮಹಾದೇವಿ ದಂಪತಿಗಳ ಸುಪುತ್ರ ಸಾತ್ವಿಕನಿಗೆ ಮೊನ್ನೆ ನಡೆದ ಪಿ.ಯು.ಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಆರುನೂರಕ್ಕೆ ಹನ್ನೊಂದೇ ಕಡಿಮೆ.
ಶ್ರೀಯುತ ನಾರಾಯಣ ಭಾಗ್ವತ ಒಬ್ಬ ಸಜ್ಜನ ಪ್ರತಿಭಾಶಾಲಿ ಪ್ರೌಢ ಶಿಕ್ಷಕರು. ಹಾಗೆಯೇ ಒಬ್ಬ ಉತ್ತಮ ರಂಗ ನಿರ್ದೇಶಕರು ಕೂಡ. ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಸಾಧಕ. ಅವರ ಹಾದಿಯೇ ಸಾತ್ವಿಕನಿಗೂ ಸ್ಫೂರ್ತಿ. ತಂದೆ ತಾಯಿಗಳ ಮುದ್ದಿನ ಮಗನಾಗಿ ಸಿರಸಿಯಲ್ಲಿಯೇ ಹುಟ್ಟಿ ಬೆಳೆದ ಸಾತ್ವಿಕ ಓದಿದ್ದು ಚೈತನ್ಯ ಪಿ.ಯು.ಕಾಲೇಜು ಸಿರಸಿಯಲ್ಲಿ. ಮೂಲತಃ ಹಂದಿಗೋಣದವರಾದ ಭಾಗವತಜೀ ಕುಟುಂಬ ವೃತ್ತಿಯ ಬಹುತೇಕ ಅವಧಿಯನ್ನು ಕಳೆದದ್ದು ಸಿರಸಿಯಲ್ಲಿ.
ಹೆಣ್ಣುಮಕ್ಕಳಾದರೆ ಓದತಾರೆ…ಗಂಡು ಮಕ್ಕಳನ್ನು ಓದಿಸೋದೆ ಕಷ್ಟ. ಬ್ಯಾಟ ಹಿಡಿದು ಹೊರಟರೆ ಸಂಜೆನೆ ಬರುವುದು ಎನ್ನುವ ಬಹುತೇಕ ಪಾಲಕರ ಪ್ರಶ್ನೆಗೆ ಸಾತ್ವಿಕ ಮಾದರಿಯಾಗಿ ಉತ್ತರವಾಗುತ್ತಾನೆ. ಶೃದ್ಧೆಯಿಂದ ಅಭ್ಯಾಸ ಮಾಡಿದರೆ ಎಂಥವನೂ ಅಗ್ರಶ್ರೇಯಾಂಕಿತನಾಗಬಲ್ಲ ಎಂಬುದಕ್ಕೆ ಸಾತ್ವಿಕ ಸಾಕ್ಷಿ.
ಸಾತ್ವಿಕನ ಬಾಳು ಉಜ್ವಲವಾಗಲಿ. ಸಮಾಜ ಆತನಿಂದ ಉತ್ತಮವಾದುದನ್ನೇ ನಿರೀಕ್ಷಿಸುತ್ತದೆ ಎಂದು ಈ ಮೂಲಕ ಹೇಳಬಯಸುತ್ತೇವೆ. ಶಿಕ್ಷಕವೃಂದ, ಕಾಲೇಜು ಊರು, ಪಾಲಕರು, ಜಿಲ್ಲೆಗೆ ಕೀರ್ತಿ ತಂದ ಸಾತ್ವಿಕನಿಗೆ physics, chemistry, Mathematics ಮೂರಕ್ಕೂ ನೂರಕ್ಕೆ ನೂರು…..ಅಬ್ಭಾ ಹುಡುಗನಿಗೆ ಆರುನೂರಕ್ಕೆ ಹನ್ನೊಂದೇ ಕಡಿಮೆ.