ಭಟ್ಕಳದಲ್ಲಿ ಮದ್ದಳೆ ಮಾಂತ್ರಿಕ ದುರ್ಗಪ್ಪ ಗುಡಿಗಾರ ಮೊಮೋರಿಯಲ್ ಚಾರಿಟೇಬಲ್ ಯಕ್ಷಗಾನ ಆಟ್ರ್ಸ್ ಅಕಾಡೆಮಿ ಚೆರಿಟೇಬಲ್ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ, ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ಇತರರನ್ನು ಕಾಣಬಹುದು.
ಭಟ್ಕಳ : ಯಕ್ಷಗಾನ ಕ್ಷೇತ್ರದ ಹೆಸರಾಂತ ಮದ್ದಳೆ ಮಾಂತ್ರಿಕ ದುರ್ಗಪ್ಪ ಗುಡಿಗಾರ ಮೆಮೋರಿಯಲ್ ಯಕ್ಷಗಾನ ಆಟ್ರ್ಸ್ ಅಕಾಡೆಮಿ ಚಾರಿಟೇಬಲ್ ಟ್ರಸ್ಟ್ ಇಲ್ಲಿಯ ಚನ್ನಪಟ್ಟಣ ಮಾರುತಿ ದೇವಸ್ಥಾನದ ರಥಬೀದಿಯಲ್ಲಿನ ವಿನಾಯಕ ರಂಗ ಮಂದಿರದಲ್ಲಿ ಉದ್ಘಾಟನೆಗೊಂಡಿತು.
ಈ ಟ್ರಸ್ಟ್ ಅಡಿಯಲ್ಲಿ ಯಕ್ಷಗಾನ ಕಲಿಕೆಯಲ್ಲಿ ಆಸಕ್ತಿಯಿದ್ದವರಿಗೆ ನುರಿತ ಕಲಾವಿದರಿಂದ ತರಬೇತಿ ನೀಡಲಾಗುವುವದು.
ಟ್ರಸ್ಟ್ ಉದ್ಘಾಟಿಸಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ ಮಾತನಾಡಿ ದುರ್ಗಪ್ಪ ಗುಡಿಗಾರ ಅವರು ಯಕ್ಷಗಾನಕ್ಕೆ ಸಲ್ಲಿಸಿದ ಸೇವೆ ಅನುಪಮವಾದುದು. ಅವರ ಶೃದ್ಧೆಯಲ್ಲಿ ಒಂದು ಶಿಸ್ತು ಇತ್ತು. ಯಕ್ಷಗಾನ ಅಕಾಡೆಮಿಯಿಂದ ಈ ನೂತನ ಅಕಾಡೆಮಿಗೆ ನಿಯಮಾನುಸಾರ ಸಹಕಾರ ನೀಡಲು ಪ್ರಯತ್ನಿಸುತ್ತೇನೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ದುರ್ಗಪ್ಪ ಗುಡಿಗಾರ ಅವರು ಯಕ್ಷಗಾನ ಪರಂಪರೆಯನ್ನು ಹೊಸ ತಲೆಮಾರಿಗೆ ದಾಟಿಸಲು ತುಂಬ ಹೆಣಗಿದ್ದರು. ಇದೀಗ ಅವರ ಆಶಯವನ್ನು ಗುಡಿಗಾರರ ಮಗಳು ಉಮಾ ಕಿಣಿ ಮತ್ತು ಅಳಿಯ ಚಂದ್ರಕಾಂತ ಕಿಣಿ ಈಡೇರಿಸಲು ಪ್ರಯತ್ನಿಸುತ್ತಿರುವುದು ಪ್ರಶಂಸನೀಯ ಅಂದರು.
ಯಕ್ಷರಕ್ಷೆಯ ಡಾ. ಐ.ಆರ್.ಭಟ್ಟ, ಜಿಲ್ಲಾ ಕ.ಸಾ.ಪ. ಗೌರವ ಕೋಶಾಧ್ಯಕ್ಷ ಉಮೇಶ ಮುಂಡಳ್ಳಿ, ಯಕ್ಷಗಾನ ಕಲಾವಿದ ಗಣೇಶ ಉಪ್ಪುಂದ, ಅವರು ದುರ್ಗಪ್ಪ ಗುಡಿಗಾರರ ಹೆಸರಿನಲ್ಲಿರುವ ಈ ಟ್ರಸ್ಟ್ ಮುನ್ನಡೆಸಲು ತಾವೆಲ್ಲ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ಟ್ರಸ್ಟ್ ನ ಉಪಾಧ್ಯಕ್ಷ ಚಂದ್ರಕಾಂತ ಕಿಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಟ್ರಸ್ಟ್ ನ ನಿರ್ದೇಶಕಿ ಉಮಾ ಕಿಣಿ ಅವರು ಆಶಯ ಗೀತೆ ಹಾಡಿದರು.ನಾಗೇಂದ್ರ ಸಂಜನ ಕಾರ್ಯಕ್ರಮ ನಿರೂಪಿಸಿದರು.