ಹೊನ್ನಾವರ: ಗುರುವಂದನೆ ಅಂದರೆ ಕೇವಲ ಗುರುಗಳಿಗೆ ಮಾತ್ರ ಅನ್ನುವುದು ತಪ್ಪು ಕಲ್ಪನೆ. ಬದುಕುವುದನ್ನು ಕಲಿಸಿಕೊಟ್ಟ ಎಲ್ಲರಿಗೂ ವಂದನೆ ಸಲ್ಲುತ್ತದೆ. ಅಂಥವರೆಲ್ಲರಲ್ಲಿ ಓರ್ವರನ್ನು ಸನ್ಮಾನಿಸುವುದರ ಮೂಲಕ ಗುರು ಸಮಾನರಾದ ಎಲ್ಲರಿಗೂ ಗೌರವಿಸುವುದು ಈ ವಂದನೆಯ ಹಿಂದಿನ ಸಂಕೇತ ಎಂದು ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ತಿಳಿಸಿದರು.
ತಾಲೂಕಿನ ಹುಡಗೋಡದಲ್ಲಿ ಬರಹಗಾರ್ತಿ ಸುಧಾ ಭಂಡಾರಿ ಮತ್ತು ಗಣೇಶ ಭಂಡಾರಿ ಸಂಘಟಿಸಿದ ‘ಸದಾಸುಖಿ’ ದಶಮಾನೋತ್ಸವದಲ್ಲಿ ಹಮ್ಮಿಕೊಂಡ ಗುರುವಂದನೆ, ಗಾನ ಸಮ್ಮಾನ ಕಾರ್ಯಕ್ರಮವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ಪರಂಪರೆಯ ಕೊಂಡಿಯನ್ನು ಕಳಚಿಕೊಳ್ಳುತ್ತಿದ್ದೇವೆ. ಇಂಥ ಕಾರ್ಯಕ್ರಮದ ಮೂಲಕ ಮನಷ್ಯ ಪ್ರೀತಿ ಹಂಚುವ ಕೆಲಸ ಆಗುತ್ತಿರುವುದರ ಜೊತೆಗೆ ಪರಂಪರೆ ನದಿಯಂತೆ ಹರಿಯಲು ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಶಿರಸಿ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಜಿ.ಎಸ್.ಭಟ್ಟ ಅವರು ಸುಧಾ ಭಂಡಾರಿಯರು ತಮ್ಮ ಇಲಾಖೆಯ ಕೆಲವೇ ಕೆಲವು ಸೃಜನಶೀಲ ವ್ಯಕ್ತಿತ್ವ ಹೊಂದಿದ ಶಿಕ್ಷಕಿ. ಶಿಕ್ಷಣ ಮತ್ತು ವಿದ್ಯಾರ್ಥಿಗಳ ಬಗ್ಗೆ ಅವರಿಗಿರುವ ಕಾಳಜಿ ಬಗ್ಗೆ ನನಗೆ ಅಭಿಮಾನವಿದೆ. ಜೊತೆಗೆ ಸಾಹಿತ್ಯ ಬಗ್ಗೂ ವಿಶೇಷ ಆಸಕ್ತಿ ಇಟ್ಟುಕೊಂಡಿರುವುದು ಗಮನಾರ್ಹ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊಳಲು ವಾದಕ ವಿನಾಯಕ ಹೊನ್ನಾವರ, ಲಕ್ಷ್ಮೀ ನಾಯ್ಕ, ಸುಮಿತ್ರಾ ಮತ್ತು ನಾರಾಯಣ ಭಂಡಾರಿ ದಂಪತಿಯನ್ನು ಸನ್ಮಾನಿಸಲಾಯಿತು.
ಪ್ರಾಸ್ತಾವಿಕ ಮಾತನಾಡಿದ ಸುಧಾ ಭಂಡಾರಿ ಅವರು ನಮ್ಮ ಬದುಕಿನಲ್ಲಿ ಸಾಹಿತ್ಯ ಮತ್ತು ಸಂಗೀತದ ಒರತೆ ಸದಾ ಜಿನುಗುತ್ತಿದ್ದರೆ ಸಮುದಾಯ ಹಸನಾಗಿರುತ್ತದೆ. ಅದಕ್ಕಾಗಿಯೇ ಇಂಥ ಕಾರ್ಯಕ್ರಮಗಳನ್ನು ತಾವು ಮತ್ತು ತಮ್ಮ ಪತಿ ಗಣೇಶ ಭಂಡಾರಿ ಅವರು ಜೊತೆ ಸೇರಿ ಹಮ್ಮಿಕೊಳ್ಳುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಯುವ ಗಾಯಕರಾದ ಕೀರ್ತನ ಹೊಳ್ಳ ಮಂಗಳೂರು ಮತ್ತು ಬಿ.ಜಿ.ಸುಮಿತ್‍ಕುಮಾರ ಹಡಿನಬಾಳ ಅವರ ಜಗಲ್‍ಬಂದಿ ತುಂಬ ಧ್ವನಿಪೂರ್ಣವಾಗಿ ನಡೆಯಿತು. ಅವರಿಗೆ ತಬಲಾ ಸಾತ್ ಗುರುರಾಜ ಹೆಗಡೆ ಆಡುಕಳ ತಬಲಾ ಸಾಥ್ ನೀಡಿದರೆ ಹರಿಶ್ಚಂದ್ರ ನಾಯ್ಕ ಹಾರ್ಮೋನಯಂ ಸಾಥ್ ನೀಡಿದರು. ಅನಂತರ ವಿನಾಯಕ ಹೊನ್ನಾವರ ಅವರಿಂದ ಕೊಳಲು ವಾದನ ನಡೆಯಿತು.
ಸುಬ್ರಹ್ಮಣ್ಯ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಸುಮನಾ ಭಂಡಾರಿ ವಂದಿಸಿದರು.