ಭಟ್ಕಳ: ಎಪ್ರಿಲ್ 27 ಶನಿವಾರದಂದು ಇಲ್ಲಿನ ನವಾಯತ ಕಾಲೋನಿಯ ಕುಶಾಲ್ ಸಭಾ ಭವನದಲ್ಲಿ ಇಂಡಿಯನ್ ನವಾಯತ್ ಫೋರಂ ವತಿಯಿಂದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು ತಾಲೂಕು ಸೇರಿದಂತೆ ಸುತ್ತಮುತ್ತಲಿನ ಉದ್ಯೋಗಾಂಕ್ಷಿಗಳು ಇದರಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂದು ಪೋರಂ ಅಧ್ಯಕ್ಷ ಅಬ್ದುಲ್ ಮಜೀದ್ ಜುಕಾಕು ನಮ್ಮ ಫೋರಂ ರಚನೆಯ ಮುಖ್ಯ ಉದ್ದೇಶ ಜಮಾತ್‍ಗಳನ್ನು ಪರಸ್ಪರ ಒಟ್ಟುಗೂಡಿಸುವುದು, ಜನರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದು, ಸಾಮಾಜಿಕ, ನೈತಿಕ ಹಾಗೂ ಧರ್ಮದಾವಾ ಕಾರ್ಯಗಳನ್ನು ಹಮ್ಮಿಕೊಳ್ಳುವುದು, ಪರಸ್ಪರ ಸಂಬಂಧಗಳನ್ನು ವೃದ್ಧಿಸುವುದು, ದೇಶಾಭಿಮಾನ, ದೇಶ ಸೇವೆಯನ್ನು ಪ್ರೇರೇಪಿಸುದು ಸೇರಿದೆ. ಪ್ರಥಮವಾಗಿ ಖಾಲಿ ಇರುವ ಕೈಗಳಿಗೆ ದುಡಿಯುವ ಅವಕಾಶವನ್ನು ಒದಗಿಸಿಕೊಡುತ್ತಿದ್ದು ಪ್ರತಿಯೋರ್ವರೂ ಕೂಡಾ ಭಾಗವಹಿಸಿ ಇದರ ಪ್ರಯೋಜನ ಪಡೆಯಬೇಕೆದಂದರು.
ಸಂಚಾಲಕ ಅಫ್ತಾಬ್ ಹುಸೇನ್ ಕೋಲಾ ಅವರು ಉದ್ಯೋಗ ಮೇಳದ ಬಗ್ಗೆ ಮಾತನಾಡಿದ್ದು ತಾಲೂಕಿನಲ್ಲಿ ಅನೇಕ ಅರ್ಹ ಜನರಿದ್ದು ಅವರಿಗೆ ಸರಿಯಾದ ಉದ್ಯೋಗ ದೊರೆಯದೇ ತೊಂದರೆ ಅನುಭವಿಸುತಿದ್ದಾರೆ. ಹಲವಾರು ಅವಕಾಶಗಳನ್ನು ತೆರೆದಿಡಲಾಗುತ್ತಿದ್ದು ಪ್ರಥಮ ಬಾರಿಗೆ ನಮ್ಮ ಫೋರಂ ಸಾಮಾಜಿಕ ಸಬಲೀಕರಣದ ಅಡಿಯಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಇತ್ತೀಚೆಗೆ ವಿದೇಶದಿಂದಲೂ ಕೂಡಾ ಸಾಕಷ್ಟು ಜನರು ಊರಿಗೆ ವಾಪಾಸು ಬರುತ್ತಿದ್ದು ಅವರಿಗೆ ಉತ್ತಮ ಉದ್ಯೋಗದ ಅನಿವಾರ್ಯತೆ ಇದೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೆಯಾಗುವಂತೆ ವ್ಯವಹಾರಗಳನ್ನು ಮಾಡಲು ಸಹ ಸಲಹೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.