ಯಲ್ಲಾಪುರ: ಕಾಳಮ್ಮ ನಗರದ ಮನೆಯೊಂದರಲ್ಲಿ ಸಂಗ್ರಹಿಸಲಾದ ಕಟ್ಟಿಗೆಯನ್ನು ಕೆಲ ದಿನಗಳ ಹಿಂದೆ ಕಳ್ಳತನ ಮಾಡಿದ್ದ ಆರೋಪಿಯನ್ನು ಇಂದು ರವಿವಾರ ಬೆಳಿಗ್ಗೆ ಯಲ್ಲಾಪುರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ .
ಕಾಳಮ್ಮನಗರ ನಿವಾಸಿ ಕಿಗನ್ ವಿನೋದ ಫರ್ನಾಂಡಿಸ್ (22) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತ ಜುಲೈ 28 ರ ರಾತ್ರಿ ಇಲ್ಲಿಯ ನಿವಾಸಿ ಅಡಿಕೆ ವಕಾರಿ ಮಾಲೀಕರಾದ ಶ್ರೀಧರ್ ಕೃಷ್ಣ ಹೆಗಡೆ ಮನೆಯಲ್ಲಿ ಕಾನೂನು ಬದ್ಧವಾಗಿ ಸಂಗ್ರಹಿಸಿದಲಾದ 55’474 ರೂಪಾಯಿ ಮೌಲ್ಯದ 16 ಸಿ.ಎಫ್.ಟಿ ಸಾಗವಾನಿ ಕಟ್ಟಿಗೆಯ 12 ನೊಗ ಹಾಗೂ ಮರದ ಕೆಲಸದ ಯಂತ್ರಗಳನ್ನು ಕಳ್ಳತನ ಮಾಡಿದ್ದ ಎನ್ನಲಾಗಿದೆ. ಈ ಕುರಿತು ಶ್ರೀಧರ್ ಹೆಗಡೆ ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ದೂರು ದಾಖಲಾಗಿರುವದನ್ನು ತಿಳಿದುಕೊಂಡ ಆರೋಪಿ ತಲೆ ಮರೆಸಿಕೊಂಡು ತಿರುಗುತ್ತಿದ್ದ, ರವಿವಾರ ಬೆಳಿಗ್ಗೆ ಪೊಲೀಸರು ಆತನನ್ನು ಬಂಧಿಸಿ ಕಳುವಾಗಿದ್ದ ಒಟ್ಟು ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸ್ ನಿರೀಕ್ಷಕ ಮಂಜುನಾಥ ನಾಯಕ ಮಾರ್ಗದರ್ಶನದಲ್ಲಿ, ಪೊಲೀಸ್ ಉಪ ನಿರೀಕ್ಷಕ ಶ್ರೀಧರ್ ಎಸ್.ಆರ್ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದಾರೆ.