ಕುಮಟಾ : ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ವಿದ್ಯಾರ್ಥಿಗಳೇ ಸಾಕ್ಷಿ ಎನ್ನಬಹುದು . ಹೌದು ಇಂದಿನ ಫಲಿತಾಂಶ ಎಲ್ಲ ವಿದ್ಯಾರ್ಥಿಗಳಿಗೆ ಮಾದರಿ ಎನ್ನಬಹುದು. ಸುಮಾರು ಹದಿನೈದು ವಿದ್ಯಾರ್ಥಿಗಳು 99.99 ಪರ್ಸೆಂಟ್ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಎಂದಿನಂತೆ ಈ ಬಾರಿಯೂ ಸಹ ಬಾಲಕಿಯರೇ ಮೇಲುಗೈ ಪಡೆದಿದ್ದಾರೆ. ಅದರಲ್ಲೂ ಸಹ ಇಬ್ಬರು ಬಾಲಕಿಯರು 625 ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮವಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡ ಗ್ರಾಮದ ಹುಬ್ಬುಣಗೇರಿ ವಿದ್ಯಾರ್ಥಿನಿಯಾದ ನಾಗಾಂಜಲಿ ಪರಮೇಶ್ವರ್ ನಾಯ್ಕ ಅವರು ಸಹ 625 ಕ್ಕೆ 625 ಅಂಕಗಳನ್ನು SSLC ಪರೀಕ್ಷೆಯಲ್ಲಿ ತಮ್ಮ ಫಲಿತಾಂಶದ ಪ್ರತಿಭೆಯನ್ನು ತೋರಿಸುವುದರ ಮೂಲಕ ರಾಜ್ಯದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಕುಮುಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ CVSK ಹೈ ಸ್ಕೂಲ್‌ನ ನಾಗಾಂಜಲಿ ಅವರ ತಂದೆ ವೃತ್ತಿಯಲ್ಲಿ ಟೆಂಪೋ ಡ್ರೈವರ್ ಎಂದು ತಿಳಿದು ಬಂದಿದ್ದು ಬಡ ಕುಟುಂಬದ ವಿದ್ಯಾರ್ಥಿನಿಯ ಸಾಧನೆಗೆ ಎಲ್ಲರೂ ಅಭಿನಂದಿಸುತ್ತಿದ್ದಾರೆ. ಕಷ್ಟಪಟ್ಟು ಓದಿದ ಪರಿಶ್ರಮವೇ ಇಂದು ಉತ್ತಮ ಫಲಿತಾಂಶ ಬರಲು ಪಮುಖ ಕಾರಣ ಎಂಬುದು ಎಲ್ಲರ ಅಭಿಪ್ರಾಯ.
“ನಾಗಾಂಜಲಿ ರಾಂಕ್ ಬರುತ್ತಾಳೆಂಬ ವಿಶ್ವಾಸ ನಮಗೆ ಹಾಗೂ ಅವಳಿಗೂ ಇತ್ತು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಹಳ ಕೂಲಂಕುಷವಾಗಿ ಅಧ್ಯಯನ ಮಾಡಿದ್ದಳು. ತುಂಬಾ ಮುಗ್ಧೆ ಹಾಗೂ ವಿಧೇಯಕ ವಿದ್ಯಾರ್ಥಿನಿ” ಎನ್ನುವುದು ಶಾಲೆಯ ಮುಖ್ಯ ಶಿಕ್ಷಕಿ ಸುಮಾ ಪ್ರಭು ಅವರ ಅಭಿಪ್ರಾಯ.
ಶಾಲೆಯಲ್ಲಿ ಪ್ರತಿವರ್ಷ 90ಕ್ಕೂ ಅಧಿಕ ಮಕ್ಕಳು ಡಿಸ್ಟಿಂಕ್ಷನ್ ಬರುತ್ತಿದ್ದರು. ಶೇ. 70 ನಮ್ಮಲ್ಲಿ ಕನಿಷ್ಠ ಅಂಕ. ಈ ಬಾರಿ 129 ಮಕ್ಕಳು ಪರೀಕ್ಷೆಗೆ ಕುಳಿತಿದ್ದರು ಎಂದು ಸುಮಾ ಪ್ರಭು ಅವರು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶೈಕ್ಷಣಿಕ ಜಿಲ್ಲೆ. ಈ ಬಾರಿ ಶೇ 88.12 ಫಲಿತಾಂಶ ದಾಖಲಿಸಿ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ಬಾರಿ ಇಷ್ಟೇ ಫಲಿತಾಂಶ ದಾಖಲಿಸಿ ಎರಡನೇ ಸ್ಥಾನದಲ್ಲಿತ್ತು. ಶಿರಸಿ ಶೈಕ್ಷಣಿಕ ಜಿಲ್ಲೆ 21ನೇ ಸ್ಥಾನದಲ್ಲಿತ್ತು. ಈ ಬಾರಿ 12ನೇ ಸ್ಥಾನಕ್ಕೆ ಬಂದಿದೆ.