ಬೆಳ್ಳಾರೆ: ಅನಾದಿಕಾಲದಿಂದಲೂ ಪ್ರಚಲಿತದಲ್ಲಿದ್ದ ಸಾಹಿತ್ಯ ಪ್ರಾಕಾರವಾದ ನೃತ್ಯರೂಪಕಗಳ ಸಂಖ್ಯೆಯು ತುಂಬಾ ವಿರಳವಾಗಿರುವ ಈ ಕಾಲಘಟ್ಟದಲ್ಲಿ ಪೌರಾಣಿಕವಾಗಿಯೂ, ಐತಿಹಾಸಿಕವಾಗಿಯೂ ಮಹತ್ವವನ್ನು ಪಡೆದಿರುವ ಅಯ್ಯಪ್ಪನ ಕಥಾನಕವನ್ನೊಳಗೊಂಡ ಈ ಕೃತಿ ರಚನೆಯು ಶ್ಲಾಘನೀಯ ಎಂದು ರಚನಾಕಾರರಾದ ಅಶ್ವಿನಿ ಕೋಡಿಬೈಲುರವರನ್ನು ಹಿರಿಯ ಕವಿ ಶ್ರೀ ಸುಬ್ರಾಯ ಚೊಕ್ಕಾಡಿಯವರು ಅಭಿನಂದಿಸಿದರು.
ಅವರು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ವೈಷ್ಣವಿ ನಾಟ್ಯಾಲಯ ಪುತ್ತೂರು(ರಿ) ಇದರ ಬೆಳ್ಳಾರೆ ಶಾಖೆಯ ‘ವೈಷ್ಣವಿ ನೃತ್ಯ ಸಂಭ್ರಮ- 2019’ ಕಾರ್ಯಕ್ರಮದಲ್ಲಿ ಅಶ್ವಿನಿ ಕೋಡಿಬೈಲು ವಿರಚಿತ ಶಬರಿಮಲೆ ಸ್ವಾಮಿ ಅಯ್ಯಪ್ಪ ನೃತ್ಯರೂಪಕದ ಕೃತಿ ಲೋಕಾರ್ಪಣೆಗೈದು ಮಾತನಾಡಿದರು. ಪತ್ರಕರ್ತ ದುರ್ಗಾಕುಮಾರ್ ನಾಯರ್‍ಕೆರೆ ಕೃತಿ ಪರಿಚಯ ಮಾಡಿ, ಪೌರಾಣಿಕ ಕಥೆಯನ್ನು ಸಮಕಾಲೀನ ಸಂದರ್ಭಕ್ಕೆ ಹೋಲಿಸಿ ಬರೆಯುವುದು ಸುಲಭದ ಕೆಲಸವಲ್ಲ. ಜನರ ಮನಸ್ಸಿಗೆ ಮುಟ್ಟುವ ಕೃತಿಗಳನ್ನು ರಚಿಸುವುದೇ ಒಂದು ಸಾಹಸ. ಈ ನೆಲದ ಚರಿತ್ರೆಗೆ ಸಂಬಂಧಿಸಿದ ಇನ್ನೂ ಅನೇಕ ಕಥಾನಕಗಳು ನೃತ್ಯರೂಪಕಗಳಾಗಿ ಇವರಿಂದÀ ರಚಿಸಲ್ಪಡಲಿ ಎಂದು ಹಾರೈಸಿದರು. ವಿದುಷಿ ನಯನ ವಿ. ರೈಯವರು ಅಧ್ಯಕ್ಷತೆವಹಿಸಿ ತಮ್ಮ ವಿಶ್ವ ಕಲಾನಿಕೇತನ ಸಂಸ್ಥೆಯ ಮೂಲಕವೂ ಇವರ ನೃತ್ಯರೂಪಕಗಳು ಪ್ರದರ್ಶನಗೊಳ್ಳಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು.
ಕೃತಿಕಾರರಾದ ಅಶ್ವಿನಿ ಕೋಡಿಬೈಲು ತಮ್ಮ ಪ್ರಾಸ್ತಾವಿಕ ಮಾತುಗಳನ್ನಾಡಿ ಈ ರೂಪಕವನ್ನು ಮೂರನೆಯ ಬಾರಿ ಪ್ರದರ್ಶಿಸುತ್ತಿರುವ ವೈಷ್ಣವಿ ನಾಟ್ಯಾಲಯ(ರಿ) ಪುತ್ತೂರು ಇವರಿಗೆ ಕೃತಜ್ಞತೆ ಸಲ್ಲಿಸಿದರು. ವೈಷ್ಣವಿ ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಸ್ವಾಗತಿಸಿ, ಸ್ವಾತಿ ಭಟ್ ಕುರುಂಬುಡೇಲು ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರ್ವಹಿಸಿದರು.
ಜನಮನ ರಂಜಿಸಿದ ನೃತ್ಯರೂಪಕ:
ಸ್ವಾಮಿ ಅಯ್ಯಪ್ಪನ ಜೀವನದ ಪ್ರತಿಯೊಂದು ಘಟ್ಟವನ್ನು ಬಿಂಬಿಸುವ ನೃತ್ಯ ರೂಪಕವು ಕೃತಿ ಲೋಕಾರ್ಪಣೆಯ ನಂತರ ಚಿತ್ತಾಕರ್ಷಕವಾಗಿ ಮೂಡಿಬಂದಿತು. ಮಹಿಷಿಯ ದಬ್ಬಾಳಿಕೆ, ಭಸ್ಮಾಸುರ-ಮೋಹಿನಿ, ಮಣಿಕಂಠನ ಜನನ, ಪಂದಳ ರಾಜನ ಅರಮನೆಯ ಸಂಭ್ರಮ, ಮಂತ್ರಿಯ ಕುತಂತ್ರ, ಮಹಿಷಿವಧೆ, ಹುಲಿಯೇರಿಬಂದ ಅಯ್ಯಪ್ಪ ಕೊನೆಯಲ್ಲಿ ಶಬರಿಮಲೆ ಕ್ಷೇತ್ರದ ಪುಣ್ಯದರ್ಶನ ಹಾಗೂ ಹರಿಹರಸುತಾಷ್ಟಕಮ್ ಸ್ತುತಿಯೊಂದಿಗೆ ಸುಮಾರು 2 ಗಂಟೆಗಳ ಕಾಲ ಈ ನೃತ್ಯ ರೂಪಕವು ಪ್ರೇಕ್ಷಕರನ್ನು ಭಕ್ತಿ-ಭಾವ ಸಾಗರದಲ್ಲಿ ತೇಲಾಡಿಸಿತು.
ವೈಷ್ಣವಿ ನಾಟ್ಯಾಲಯದ ನಿರ್ದೇಶನದಲ್ಲಿ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್‍ರವರ ನಟುವಾಂಗದೊಂದಿಗೆ ಅವರ ಬೆಳ್ಳಾರೆ ಶಾಖೆಯ ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಟ್ಟ ಈ ನೃತ್ಯರೂಪಕಕ್ಕೆ ಸೊಗಸಾಗಿ ರಾಗ ಸಂಯೋಜನೆ ಮಾಡಿ ಹಾಡಿದವರು ರಾಷ್ಟ್ರಪ್ರಶಸ್ತಿ ಪುರಸೃತ ಸಂಗೀತ ಶಿಕ್ಷಕರಾದ ವಿದ್ವಾನ್ ವೆಳ್ಳಿಕ್ಕೋತ್ ವಿಷ್ಣು ಭಟ್‍ರವರು. ವಿದ್ವಾನ್ ವಸಂತ ಕುಮಾರ್ ಗೋಸಾಡ ಸಹಕರಿಸಿದರು. ಮೃದಂಗದಲ್ಲಿ ವಿದ್ವಾನ್ ಗಿತೇಶ್ ಕುಮಾರ್ ನೀಲೇಶ್ವರ, ಕೊಳಲಿನಲ್ಲಿ ವಿದ್ವಾನ್ ರಾಜಗೋಪಾಲ ಕಾಂಞಂಗಾಡ್, ಕೀಬೋರ್ಡ್‍ನಲ್ಲಿ ಶ್ರೀ ಬಾಬಣ್ಣ ಪುತ್ತೂರು, ರಿದಂ ಪ್ಯಾಡ್ನಲ್ಲಿ ಶ್ರೀ ಸಚಿನ್ ಪುತ್ತೂರು, ಮುಖವರ್ಣಿಕೆ ಮತ್ತು ವಸ್ತ್ರವಿನ್ಯಾಸದಲ್ಲಿ ಶ್ರೀ ವಿಘ್ನೇಶ್ ವಿಶ್ವಕರ್ಮ ಭಾವನಾ ಕಲಾ ಆಟ್ರ್ಸ್ ಪುತ್ತೂರು ಮತ್ತು ಶ್ರೀ ಕೃಷ್ಣಪ್ಪ ಮಾಸ್ಟರ್ ಅಡೂರು ಸಹಕರಿಸಿದರು. ನಾಟ್ಯಾಲಯದ ವತಿಯಿಂದ ರೂಪಕ ರಚನಾಕಾರರಾದ ಶ್ರೀಮತಿ ಅಶ್ವಿನಿ ಕೋಡಿಬೈಲು ಮತ್ತು ಎಲ್ಲಾ ಹಿಮ್ಮೇಳ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.