ಕುಮಟಾ: ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡ್ಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಗ್ರಾಮಸ್ಥರೆಲ್ಲ ಒಟ್ಟಾಗಿ ತಮ್ಮೂರ ಸಾಧಕ ವಿದ್ಯಾರ್ಥಿ ಪ್ರಣೀತ್‍ಗೆ ಸನ್ಮಾನಿಸುವ ಸಮಾರಂಭ ಹಮ್ಮಿಕೊಂಡಿದ್ದರು. ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಓದಿದವಗೆ ಗಣ್ಯರು ಅಭಿನಂದಿಸಿ ಶುಭಕೋರಿದರು.


ಗ್ರಾಮಸ್ತರ ಪರವಾಗಿ ಸನ್ಮಾನಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಹಿಂದೆಲ್ಲಾ ಕನ್ನಡ ಮಾಧ್ಯಮದಲ್ಲಿ ಕಲಿತವರೇ ದೊಡ್ಡ ದೊಡ್ಡ ಸಾಧನೆಗೈದಿರುವುದನ್ನು ಸ್ಮರಿಸುತ್ತಾ, ಕನ್ನಡದ ಕೀಳರಮೆ ತೊರೆದು ಪ್ರಸ್ತುತ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುವುದೇ ದೊಡ್ಡ ಹೆಮ್ಮೆ. ಕಡ್ಲೆ ಕುಟುಂದವರು ತಾವೂ ಅಪ್ಪಟ ಕನ್ನಡಾಭಿಮಾನಿಗಳೆಂದು ಸಾಬೀತು ಪಡಿಸಿದ್ದಾರೆಂದು ಅಭಿಮಾನದಿಂದ ನುಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಣೀತ್ ತನ್ನ ಸಾಧನೆಯ ಹಾದಿಯಲ್ಲಿ ನೆರವಾದ ಪೋಷಕ-ಶಿಕ್ಷಕವರ್ಗದ ಸಹಕಾರ ಸ್ಮರಿಸಿ ಜನೋಪಕಾರದ ಕಾರ್ಯಕ್ಕೆ ತನ್ನ ಬದುಕನ್ನು ರೂಪಿಸಿಕೊಳ್ಳುವ ಹಂಬಲ ವ್ಯಕ್ತಪಡಿಸಿದರು.

RELATED ARTICLES  ಗ್ರಾಮ ಪಂಚಾಯತಿಯಲ್ಲೇ ಇನ್ಮುಂದೆ ಜನನ- ಮರಣ ಪ್ರಮಾಣ ಪತ್ರ


ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ರತ್ನಾಕರ ನಾಯ್ಕ ಸ್ಮರಣಿಕೆ ನೀಡಿ, ಮಾತನಾಡಿ ಶಾಲಾಭಿವೃದ್ಧಿ ನಿಟ್ಟಿನಲ್ಲಿ ಊರ ಜನರು ಹೊಂದಿರುವ ಕಾಳಜಿಯನ್ನು ಆ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಪೇಕ್ಷಿತ ಸಾಧನಗಳನ್ನು ಪಡೆಯಲು ಉತ್ಸಾಹ ಹೊಂದಿರುವುದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಕಲಿಕಾ ಮಾಧ್ಯಮ ಹಾಗೂ ಪಡೆದ ಜ್ಞಾನ ಬೇರೆ ಬೇರೆ ಆಗಿರಲಾರದೆಂದು ಡಾ.ರವಿರಾಜ ಕಡ್ಲೆ ಅಭಿಪ್ರಾಯಿಸಿದರು. ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎನ್.ಆರ್.ಗಜು , ಸಿವಿಎಸ್ ಕೆ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ಎಂ.ಎಂ.ಹೆಗಡೆ ಮತ್ತಿತರರು ಮಾತನಾಡಿದರು.

RELATED ARTICLES  ಕುಮಟಾದಲ್ಲಿ 24, ಹೊನ್ನಾವರದಲ್ಲಿ 11 ಕೊರೋನಾ ಕೇಸ್


ಇದೇ ಸಂದರ್ಭದಲ್ಲಿ ಕಡ್ಲೆ ಗ್ರಾ.ಪಂ. ಸದಸ್ಯ ಮಾರುತಿ ಶೆಟ್ಟಿ ಶಾಲಾ ಕೊಠಡಿ ನಿರ್ಮಾಣಕ್ಕೆ ಅನುದಾನ ವಿಸ್ತರಿಸಲು ಶಾಸಕರಲ್ಲಿ ಮತ್ತು ಜನಪ್ರತಿನಿಧಿಗಳಲ್ಲಿ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಬಾಡ ಗ್ರಾ. ಪಂ. ಸದಸ್ಯ ಜಗನ್ನಾಥ ನಾಯ್ಕ ಶ್ರೇಯಾಂಕಿತರನ್ನು ಪುರಸ್ಕರಿಸುವಂತೆ ಅನುತ್ತೀರ್ಣರಾದವರಿಗೆ ಜೀವನ ಎದುರಿಸುವ ಹಾಗೂ ಧೈರ್ಯತುಂಬುವ ಕಾರ್ಯವೂ ಆಗಬೇಕಾಗಿದೆ ಎಂದರು. ಗ್ರಾ.ಪಂ.ಸದಸ್ಯ ರಾಮ ಮಡಿವಾಳ, ಎಸ್ಡಿಎಂಸಿ ಅಧ್ಯಕ್ಷ ಶ್ರೀಕಾಂತ ಮಡಿವಾಳ, ಉದ್ಯಮಿ ಎಂ.ಎಂ.ಹೆಗಡೆ, ಉಷಾ ರವಿರಾಜ ಕಡ್ಲೆ, ಶಿಕ್ಷಕವೃಂದ ಹಾಗೂ ಊರ ಪ್ರಮುಖರು ಉಪಸ್ಥಿತರಿದ್ದರು. ಪ್ರಣೀತ್ ಸಹಪಾಠಿಗಳಿಗೆ ಪಾಠೋಪಕರಣಗಳನ್ನು ವಿತರಿಸಿದ್ದು ವಿಶೇಷವಾಗಿತ್ತು. ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗೇಶ ಭಟ್ಟ ಮುಂಚೂಣಿಯಲ್ಲಿದ್ದು ಕಾರ್ಯಕ್ರಮ ಸಂಘಟಿಸಿದ್ದರು. ಶಾಲಾ ಮುಖ್ಯಾಧ್ಯಾಪಕಿ ಸುವರ್ಣ ಶೇಟ್ ಪರಿಚಯಿಸಿ ವಂದಿಸಿದರು. ಶಿಕ್ಷಕ ರಾಜು ನಾಯ್ಕ ನಿರೂಪಿಸಿದರು.