ಹೊನ್ನಾವರ: ಸಿಬಿಎಸ್ಇ​ 10ನೇ ತರಗತಿ ಪರೀಕ್ಷೆಯಲ್ಲಿ ಧಾರವಾಡದ ಜೆಎಸ್​ಎಸ್ ಸಂಸ್ಥೆಯ ವಿದ್ಯಾರ್ಥಿನಿ ಗಿರಿಜಾ ಮಂಜುನಾಥ ಹೆಗಡೆ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದಿದ್ದಾಳೆ. 500 ಅಂಕಗಳಿಗೆ 497 ಅಂಕ ಗಳಿಸಿ ಶೇ.99.4 ಸಾಧನೆಗೈದಿದ್ದಾರೆ. ಆದರೆ ಈ ಹುಡುಗಿ ಉತ್ತರ ಕನ್ನಡದ ಪ್ರತಿಭೆ ಎಂಬುದು ವಿಶೇಷ.

ಎಸ್​ಡಿಎಂ ಸಂಸ್ಥೆಯ ಮೆಡಿಕಲ್ ಕಾಲೇಜಿನಲ್ಲಿ ಹಾರ್ಟಿಕಲ್ಚರಿಸ್ಟ್ ಆಗಿರುವ ಮಂಜುನಾಥ ಹೆಗಡೆ ಹಾಗೂ ತುಂಗಾ ದಂಪತಿ ಹಿರಿಯ ಪುತ್ರಿ ಗಿರಿಜಾ. ದ್ವಿತೀಯ ರ್ಯಾಂಕ್ ಮೂಲಕ ತನ್ನ ಕುಟುಂಬ ಹಾಗೂ ಜೆಎಸ್​ಎಸ್ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ. ಗಿರಿಜಾ ಪಾಲಕರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗ್ವಾ ಸುಬ್ರಮಣ್ಯ ಗ್ರಾಮದವರು.

RELATED ARTICLES  ವಿಶಿಷ್ಟವಾಗಿ ಗುರು ವಂದನೆ ಸಲ್ಲಿಸಿದ ವಿಧಾತ್ರಿ ಅಕಾಡೆಮಿಯ ವಿದ್ಯಾರ್ಥಿಗಳು.

ಎಲ್​ಕೆಜಿಯಿಂದ 10ನೇ ತರಗತಿವರೆಗೆ ಜೆಎಸ್​ಎಸ್ ಸಂಸ್ಥೆಯ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್​ನಲ್ಲಿ ಓದಿದ್ದಾರೆ. ಇಂಗ್ಲಿಷ್-98, ಸಂಸ್ಕೃತ-99, ಗಣಿತ-100, ವಿಜ್ಞಾನ-100, ಸಮಾಜ ವಿಜ್ಞಾನ-100 ಅಂಕ ಗಳಿಸಿದ್ದಾರೆ. ‘ಪರೀಕ್ಷೆಗೆ ವಿಶೇಷ ತಯಾರಿ ಮಾಡಿದ್ದೆ. ಶಾಲೆಯಲ್ಲಿ ಕಲಿಸಿದ್ದಷ್ಟೇ ಅಲ್ಲದೆ ಆವಂತಿ ಕೋಚಿಂಗ್ ಕ್ಲಾಸ್​ಗೆ ಹೋಗುತ್ತಿದ್ದೆ. ಹಿಂದಿನ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ನಿರಂತರವಾಗಿ ಬಿಡಿಸುತ್ತಿದ್ದೆ. ಇದರಿಂದ ಪರೀಕ್ಷೆಗೆ ಯಾವ ರೀತಿಯ ಪ್ರಶ್ನೆಗಳು ಬರಬಹುದು ಎಂಬುದು ಗೊತ್ತಾಗುತ್ತಿತ್ತು. ಯಾವುದೇ ವಿಷಯದಲ್ಲಿ ಸಂದೇಹಗಳು ಎದುರಾದರೆ ಆಯಾ ವಿಷಯಗಳ ಶಿಕ್ಷಕರಿಂದ ಪರಿಹರಿಸಿಕೊಳ್ಳುತ್ತಿದ್ದೆ. ಮುಂದೆ ಏರ್​ಪೋರ್ಸ್ ಅಧಿಕಾರಿಯಾಗುವ ಗುರಿ ಇಟ್ಟುಕೊಂಡಿದ್ದೇನೆ’ ಎಂದು ಗಿರಿಜಾ ಹೆಗಡೆ ಹೇಳುತ್ತಾಳೆ.

RELATED ARTICLES  ಸಾರ್ವಭೌಮ ಗುರುಕುಲ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ

ಇದಿಷ್ಟೇ ಅಲ್ಲ ಇತ್ತೀಚೆಗೆ ನಡೆದ ಪ್ರತಿಭಾನ್ವೇಷಣೆಯಲ್ಲಿ ಗಿರಿಜಾ ಹೆಗಡೆ ಉತ್ತಮ ಸಾಧನೆ ತೋರಿದ್ದರು. ಈ ಮೂಲಕ ಚಂದ್ರಯಾನ-2 ಉಡಾವಣೆ ವೀಕ್ಷಣೆಗೆ ಆಯ್ಕೆಯಾಗಿರುವುದು ಮತ್ತೊಂದು ಹೆಮ್ಮೆಯ ಸಂಗತಿ.