ಬೆಂಗಳೂರು: ಸುಧೀರ್ಘ 74 ಗಂಟೆಗಳ ಕಾಲ ರಾಜ್ಯದ ಪ್ರಭಾವಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ‘ಸಾಮ್ರಾಜ್ಯ’ವನ್ನು ಶೋಧಿಸಿದ ಅದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ರೂ.300 ಕೋಟಿಯಷ್ಟು ಅಘೋಷಿತ ಆಸ್ತಿ ಬಗ್ಗೆ ಮಾಹಿತಿ ದೊರಕಿದೆ ಎಂದು ರಾಷ್ಟ್ರೀಯ ಸುದ್ದಿವಾಹಿನಿಗಳು ವರದಿ ಮಾಡಿವೆ.
ಶಿವಕುಮಾರ್ ಮತ್ತವರ ಸಂಬಂಧಿಕರು, ಸ್ನೇಹಿತರು, ಆಪ್ತರ ನಿವಾಸ, ಕಚೇರಿಗಳ ಮೇಲೆ ನಡೆದ ಕಾರ್ಯಾಚರಣೆಯಲ್ಲಿ ಈ ಅಘೋಷಿತ ಆಸ್ತಿ ಪತ್ತೆಯಾಗಿದೆ. ಇದರಲ್ಲಿ ಶಿವಕುಮಾರ್ ಅವರಿಗೆ ಸೇರಿದ್ದು ಎಷ್ಟು? ಅವರ ಆಪ್ತರಿಗೆ ಸೇರಿದ ಆಸ್ತಿ ಎಷ್ಟು ಎಂಬುದು ಇನ್ನು ಮುಂದೆ ವಿಚಾರಣೆಯಿಂದ ಖಚಿತವಾಗಬೇಕಿದೆ ಎಂದು ಹೇಳಲಾಗುತ್ತಿದೆ.
ಕಳೆದ ಮೂರು ದಿನಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು ಶನಿವಾರ ಮಧ್ಯಾಹ್ನದ ಬಳಿಕ ತಡರಾತ್ರಿವರೆಗೆ ದಾಖಲೆಗಳ ಪರಾಮರ್ಶೆ ನಡೆಸಿದರು. ಈ ವೇಳೆ ಅಧಿಕಾರಿಗಳು 80ಕ್ಕೂ ಹೆಚ್ಚು ಸ್ಥಳಗಳ ಪರಿಶೀಲನೆ ನಡೆಸಿದಾಗ ಒಟ್ಟಾರೆ ರೂ.300 ಕೋಟಿಯಷ್ಟು ಅಘೋಷಿತ ಆಸ್ತಿ ಬಹಿರಂಗಗೊಂಡಿದೆ. ಒಟ್ಟು ರೂ.15 ಕೋಟಿಯಷ್ಟು ನಗದು ಸೇರಿ ರೂ.100 ಯಷ್ಟು ಆಭರಣಗಳಿರುವುದು ಗೊತ್ತಾಗಿದೆ. ಇನ್ನುಳಿದ ರೂ.200 ಕೋಟಿಗಳ ಕುರಿತ ದಾಖಲೆಗಳನ್ನು ಬಹಳ ಎಚ್ಚರಿಕೆಯಿಂದ ಪರಿಶೀಲನೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ತಿಳಿದುಬಂದಿದೆ.
ಕಳೆದ 74 ಗಂಟೆಗಳ ಕಾಲ ನಿರಂತರವಾಗಿ ಐಟಿ ಅಧಿಕಾರಿಗಳು ಬೆಂಗಳೂರು, ಕನಪುರ ಸೇರಿದಂತೆ ಶಿವಕುಮಾರ್ ಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದರು. ಸದಾಶಿವನಗರದ ನಿವಾಸದಲ್ಲಿ 3 ದಿನಗಳ ಕಾಲ ಮೊಕ್ಕಾಂ ಹೂಡಿದ್ದ ಅಧಿಕಾರಿಗಳು ದಾಖಲೆಗಳನ್ನು ಹಿಡಿದು ಪ್ರತಿಯೊಂದಕ್ಕೂ ಸ್ಪಷ್ಟನೆ ಕೇಳಿದ್ದರು. ಎಲ್ಲದಕ್ಕೂ ವಿವರಣೆ ನೀಡಿದ ಸಚಿವರು ತಕ್ಷಣ ಲಭ್ಯವಾಗದ ದಾಖಲೆಗಳನ್ನು ಶೀಘ್ರದಲ್ಲಿಯೇ ಇಲಾಖೆಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ನಿರಂತರ ಐಠಿ ದಾಲಿಯ ನಂತರ ಡಿ.ಕೆ.ಶಿವಕುಮಾರ್ ಬಂಧನಕ್ಕೆ ಒಳಗಾಗುತ್ತಾರೆ ಅಥವಾ ಕೆಲ ಸಮಯ ತೆರೆಮರೆಗೆ ಸರಿಯುತ್ತಾರೆಂದು ಈ ಹಿಂದೆ ಭಾವಿಸಲಾಗಿತ್ತು. ಆದರೆ, ಐಟಿ ಅಧಿಕಾರಿಗಳು ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿದೆ ಸದಾಶಿವನಗರದ ಮನೆಯಿಂದ ಹೊರಹೋಗುತ್ತಲೇ ಬಿಳಿ ಶರ್ಟ್-ರೇಷ್ಮೆ ಪಂಚೆ ತೊಟ್ಟು ನಗುತ್ತಲೇ ಡಿಕೆಸಿ ಹೊರಬಂದರು.
ನಂತರ ರಾಜ್ಯಪಾಲ ವಜುಭಾಯ್ ವಾಲಾ ಅವರನ್ನು ಭೇಟಿ ಮಾಡಲು ರಾಜಭವನಕ್ಕೆ ತೆರಳುತ್ತಿದ್ದ 44 ಗುಜರಾತಾ ಕಾಂಗ್ರೆಸ್ ಶಾಸಕರ ಜೊತೆಗೂಡಿದರು. ರಾಜ್ಯಪಾಲರನ್ನು ಭೇಟಿ ಮಾಡುವುದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್ ಅವರು, ಸಂವಿಧಾನವನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ಎಲ್ಲಾ ಆರೋಪಗಳಿಗೆ ದಾಖಲೆಗಳ ಸಮೇತ ಸೂಕ್ತ ಕಾಲದಲ್ಲಿ ಉತ್ತರ ನೀಡುತ್ತೇನೆ. ಪಂಚನಾಮೆ ವರದಿ ಆಧರಿಸಿ ಮಾಧ್ಯಮಗಳಿಗೆ ಉತ್ತರ ಕೊಡುವೆ ಎಂದು ತಿಳಿಸಿದ್ದಾರೆ.
ನಂತರ ಐಟಿ ದಾಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂಬ ತಮ್ಮ ತಾಯಿ ಗೌರಮ್ಮ ಅವರ ಹೇಳಿಕೆಗೆ ಶಿವಕುಮಾರ್ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದರು. ನನ್ನ ತಾಯಿ ವಿದ್ಯಾವಂತರಲ್ಲ. ದಾಳಿ ನಡೆಸಿದ ಐಟಿ ಇಲಾಖೆ ಯಾರ ಅಧೀನದಲ್ಲಿರುತ್ತದೆ ಎಂಬುದು ಅವರಿಗೆ ತಿಳಿದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಗುಜರಾತ್ ಶಾಸಕರ ಜೊತೆಗೆ ವಿಧಾನಸೌಧ, ರೆಸಾರ್ಟ್ ಮತ್ತಿತರ ಕಡೆ ಸುತ್ತಾಡುವುದಕ್ಕೂ ಮುನ್ನ ಆಡಿಟರ್ ನಾಗರಾಜ್ ಎಂಬುವವರ ನಿವಾಸದಲ್ಲಿರುವ ನೊಣವಿನಕೆರೆ ಕರಿಸಿದ್ದೇಶ್ವರ ಅಜ್ಜನ ಸನ್ನಿಧಿಗೆ ಭೇಟಿ ನೀಡಿದ ಅವರು ಆಶೀರ್ವಾದ ಪಡೆದರು.
RELATED ARTICLES  ನೋಡ ನೋಡುತ್ತಲೇ ನಡೆದೋಯ್ತಾ ಅನಾಹುತ..!