ಸಿದ್ದಾಪುರ:‘ಗೋವುಗಳು ಹಾಗೂ ಮಕ್ಕಳು ಒಂದಾಗಬೇಕು. ಮಕ್ಕಳಲ್ಲಿ ಗೋವಿನ ಕುರಿತು ಪ್ರೀತಿ ಹೆಚ್ಚಬೇಕು’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಇಲ್ಲಿ ಕಿವಿಮಾತು ಹೇಳಿದರು
ತಾಲ್ಲೂಕಿನ ಭಾನ್ಕುಳಿ ಮಠದ ಗೋಸ್ವರ್ಗದಲ್ಲಿ ಶಂಕರ ಪಂಚಮಿ ಉತ್ಸವದ ಅಂಗವಾಗಿ ಬುಧವಾರ ನಡೆದ ಮಕ್ಕಳ ಮಹಾ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಮಕ್ಕಳೊಂದಿಗೆ ಸಂವಾದ ನಡೆಸಿದ ಸ್ವಾಮೀಜಿ, ‘ಗೋವು ನಮಗೆ ಹಾಲಿನ ಮೂಲಕ ಪ್ರೀತಿಯ ಧಾರೆಯೆರೆಯುತ್ತದೆ. ದೇಸಿ ಗೋವಿನ ಹಾಲಿನಲ್ಲಿ ಸತ್ವಗುಣವಿದೆ. ಈ ಹಾಲಿನ ಸೇವನೆಯಿಂದ ಸ್ಥಿರತೆ, ಏಕಾಗ್ರತೆ ಹಾಗೂ ಶಕ್ತಿ ದೊರೆಯುತ್ತದೆ’ಎಂದರು.
‘ ಗೋವು ಎಂದರೆ ಹಾಲು. ಮಕ್ಕಳು ಎಂದರೇ ಜೇನು. ಈ ಎರಡರ ಸಮಾಗಮ ಇಂದು ಗೋಸ್ವರ್ಗದಲ್ಲಿ ಉಂಟಾಗಿದೆ’ ಎಂದರು.
ದೇಸಿ ಗೋವಿನ ಹಾಲಿನಲ್ಲಿಯ ಅಂಶಗಳ ಕುರಿತು ಡಿ.ಎಸ್.ಹೆಗಡೆ ವಿವರಣೆ ನೀಡಿದರು. ಮಹಾಮಂಡಳದ ಅಧ್ಯಕ್ಷೆ ಈಶ್ವರೀ ಬೇರ್ಕಡವು, ಪ್ರಮುಖರಾದ ಕುಮಾರಸ್ವಾಮಿ ವರ್ಮುಡಿ, ಆರ್.ಎಸ್.ಹೆಗಡೆ ಹರಗಿ, ಅ.ಪು.ನಾರಾಯಣ ಭಟ್ಟ ಮತ್ತಿತರರು ಇದ್ದರು.