ಕುಮಟಾ: ಬಡಗುತಿಟ್ಟು ಯಕ್ಷರಂಗದ ಹಿರಿಯ ಕಲಾವಿದ ನೆಬ್ಬೂರು ನಾರಾಯಣ ಭಾಗವತ ಅವರು ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಇವರ ನಿಧನದಿಂದ ಬಡಗುತಿಟ್ಟಿನ ಮೇರು ಭಾಗವತರ ಪರಂಪರೆ ಕೊಂಡಿಯೊಂದು ಕಳಚಿದೆ. ಇವರು ಪತ್ನಿ, ಪುತ್ರ, ಪುತ್ರಿ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ತಮ್ಮ ಶ್ರೀಮಂತ ಕಂಠದಿಂದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ರಂಗದಲ್ಲಿ ಭಾಗವತರಾಗಿ ಪ್ರಸಿದ್ಧರಾದವರು ನೆಬ್ಬೂರು ನಾರಾಯಣ ಭಾಗವತರು. ಕೋಟ ಅಮೃತೇಶ್ವರಿ ಮೇಳ, ಇಡುಗುಂಜಿ ಕೆರೆಮನೆ ಮೇಳಗಳಲ್ಲಿ ಮೂರು ತಲೆಮಾರಿನ ಕಲಾವಿದರನ್ನು ಕುಣಿಸಿ, ಮೆರೆಸಿದ ಹೆಗ್ಗಳಿಕೆ ಇವರದ್ದು.
1956-57 ರ ಸಮಯದಲ್ಲಿ ಯಕ್ಷಗಾನದ ಆಸಕ್ತಿಯನ್ನು ಬೆಳೆಸಿಕೊಂಡ ಅವರು ಕೆರೆಮನೆ ಮೇಳವನ್ನು ಸೇರಿದರು. ಅಲ್ಲಿಂದ ಪ್ರಾರಂಭವಾದ ಅವರ ಯಕ್ಷಗಾನ ಪಯಣ 2010ರವರೆಗೂ ಅದೇ ಮೇಳದಲ್ಲಿ ಪ್ರಧಾನ ಭಾಗವತರಾಗಿ ಮುಂದುವರಿದಿತ್ತು.
ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ ಅವರಲ್ಲಿ ಭಾಗವತಿಕೆ ಅಭ್ಯಾಸ ಮಾಡಿದ ಅವರು, ಪ್ರಾಚಾರ್ಯ ನಾರ್ಣಪ್ಪ ಉಪ್ಪೂರ ಭಾಗವತರು ಕೆರೆಮನೆ ಮೇಳದಲ್ಲಿ ಇರುವಾಗ ಅವರೊಂದಿಗೆ ಸಂಗೀತಗಾರರಾಗಿ ಇದ್ದರು. ಅವರನ್ನು ತಮ್ಮ ಗುರುವಿಗೆ ಸಮ ಎಂದು ಭಾಗವತರೇ ಹೇಳುತ್ತಿದ್ದರು.
ಭಾವನಾತ್ಮಕ ಆಖ್ಯಾನಗಳಾದ ಕರ್ಣಪರ್ವ, ನಳದಮಯಂತಿ, ಹರಿಶ್ಚಂದ್ರ, ರಾಮನಿರ್ಯಾಣದಂತಹ ಪ್ರಸಂಗಗಳನ್ನು ಜನಮಾನಸದಲ್ಲಿ ಅಚ್ಚಳಿಯದಂತೆ ಮಾಡಿದ ಕೀರ್ತಿ ನೆಬ್ಬೂರು ಅವರಿಗೆ ಸಲ್ಲುತ್ತದೆ. ಕಲೆ ಎಂಬುದು ಆರಾಧನೆಯೇ ಹೊರತು ಗಳಿಗೆಯ ಭಾಗವಲ್ಲ ಎಂದು ತಾವು ಇರುವಷ್ಟು ದಿನವೂ ಅನುಸರಿಸಿಕೊಂಡು ಬಂದವರು ಇವರು.
ಭಾಗವತರ ಸೇವೆಯನ್ನು ಗುರುತಿಸಿ ಸಂದ ಪ್ರಶಸ್ತಿ- ಪುರಸ್ಕಾರಗಳು ಅನೇಕ. ಇಳಿವಯಸ್ಸಿನಲ್ಲೂ ಉತ್ಸಾಹದ ಚಿಲುಮೆ ಆಗಿದ್ದ ಅವರು ಅಭಿಮಾನಿಗಳ ಆಗ್ರಹಕ್ಕೆ ಮಣಿದು ಆಟ-ಕೂಟದಲ್ಲಿ ಭಾಗವಹಿಸುತ್ತಿದ್ದರು. ಅವರ ನಿಧನದಿಂದಾಗಿ ಉತ್ತರ ಕನ್ನಡ ಪರಂಪರೆಯ ಕೊಂಡಿ ಕಳಚಿದಂತಾಗಿದೆ.
ಹೊರರಾಜ್ಯಗಳು ಮತ್ತು ಹೊರ ದೇಶಗಳಲ್ಲಿ ಕೂಡ ಯಕ್ಷಗಾನ ಪ್ರೇಮಿಗಳು ನೆಬ್ಬೂರು ನಾರಾಯಣ ಭಾಗವತರ ಕಂಠದ ಸವಿಯನ್ನು ಕೇಳಿ ಖುಷಿಪಟ್ಟಿದ್ದಾರೆ.
ನೆಬ್ಬೂರು ನಾರಾಯಣ ಭಾಗವತರ ನಿಧನಕ್ಕೆ ಯಕ್ಷಾಭಿಮಾನಿಗಳು ಸೇರಿದಂತೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.