ಹಳ್ಳಿಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕೊಟ್ಟಿಗೆ ಇರುತ್ತದೆ. ಹಸು ಅಥವಾ ಎಮ್ಮೆಯ ಹಾಲಿಗೆ ರಾತ್ರಿ ಮಲಗುವಾಗ ಹೆಪ್ಪುಹಾಕಿ ಮಲಗಿದರೆ ಬೆಳಗಾಗುವಷ್ಟರಲ್ಲಿ ಸೊಗಸಾದ ಗಟ್ಟಿ ಮೊಸರು ಸಿದ್ಧವಾಗಿರುತ್ತದೆ. ಕೆಲವರಿಗಂತೂ ಬೆಳಗ್ಗೆ ತಿಂಡಿಗೂ ಮೊಸರು ಬೇಕು, ಮಧ್ಯಾಹ್ನ ಊಟಕ್ಕಂತೂ ಇರಲೇಬೇಕು. ಇನ್ನು ಸಂಜೆ ವೇಳೆಯಲ್ಲೂ ಅವಲಕ್ಕಿಗೆ ಮೊಸರು ಹಾಕಿಕೊಂಡು ತಿನ್ನುವವರಿದ್ದಾರೆ. ಇಂದಿನ ದಿನಗಳಲ್ಲಿ ಇಂತಹ ಪದ್ಧತಿ ಕಡಿಮೆಯಾಗುತ್ತಿದ್ದು, ಮೊಸರು ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗಿ ದೇಹದ ತೂಕ ಏರುತ್ತದೆ ಎನ್ನುವ ಭಯ ಯುವಜನತೆಯನ್ನು ಆವರಿಸಿದೆ. ಹೀಗಾಗಿ, ಅವರು ಹಾಲು-ಮೊಸರು, ತುಪ್ಪಗಳಿಂದ ಕೊಂಚ ದೂರ ದೂರ.
ದಿನಬಳಕೆಯ ನಂತರವೂ ಉಳಿದ ಹಾಲನ್ನು ಹೆಪ್ಪು ಹಾಕಿದ ನಂತರ ಮೊಸರನ್ನು ಕಡೆದು ಬೆಣ್ಣೆ ತೆಗೆದು ತುಪ್ಪ ಮಾಡಲಾಗುತ್ತದೆ. ಹಾಗೆ ಬೆಣ್ಣೆ ತೆಗೆದ ನಂತರ ಉಳಿಯುವ ಮಜ್ಜಿಗೆಯನ್ನು ಬಹುತೇಕರು ಬಳಸುವುದೇ ಇಲ್ಲ. ಇನ್ನು, ನಗರ ಪ್ರದೇಶದಲ್ಲಂತೂ ಪ್ಯಾಕೆಟ್ನಲ್ಲಿ ಮೊಸರು ಸಿಗುವುದರಿಂದ ಮಜ್ಜಿಗೆಯ ತಂಟೆಗೆ ಯಾರೂ ಹೋಗುವುದೇ ಇಲ್ಲ. ಬಿಸಿಲಿನ ಧಗೆ ಹೆಚ್ಚಾದಾಗ ಕೆಲವೊಬ್ಬರು ಪಾನಕದ ಬದಲಾಗಿ ಮಜ್ಜಿಗೆಗೆ ಮಸಾಲೆ ಹಾಕಿಕೊಂಡು ಕುಡಿಯುತ್ತಾರೆ. ಆದರೆ, ಹೀಗೆ ನಾವು ನಿರ್ಲಕ್ಷ್ಯ ಮಾಡುವ ಮಜ್ಜಿಗೆಯಿಂದ ಎಷ್ಟೆಲ್ಲ ಪ್ರಯೋಜನೆಗಳಿವೆ ಎಂಬ ವಿಷಯವನ್ನು ನೀವು ತಿಳಿದರೆ ಆಶ್ಚರ್ಯಪಡುತ್ತೀರಿ.
ಹೌದು, ದಿನನಿತ್ಯ ಜಿಮ್ನಲ್ಲಿ ಬೆವರು ಹರಿಸುವ ಬದಲು ಆಹಾರ ಪದ್ಧತಿಯಲ್ಲಿ ಕೊಂಚ ಎಚ್ಚರಿಕೆ ವಹಿಸಿದರೆ ದೇಹದ ತೂಕವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಿದೆ. ಅದರಲ್ಲೂ ಮಜ್ಜಿಗೆಯನ್ನು ಹೆಚ್ಚೆಚ್ಚು ಬಳಸುವುದರಿಂದ ದೇಹದ ತೂಕವೂ ಕಡಿಮೆಯಾಗುತ್ತದೆ, ಆರೋಗ್ಯವೂ ಸುಧಾರಿಸುತ್ತದೆ. ಮಜ್ಜಿಗೆ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಹೀಗಾಗಿ, ದೇಹದಲ್ಲಿ ಯಾವುದೇ ಕಲ್ಮಶ ಉಳಿಯದಂತೆ ದೇಹವನ್ನು ಸ್ವಚ್ಛವಾಗಿಡಲು ಮಜ್ಜಿಗೆ ಸಹಕಾರಿ. ತೀರಾ ಹುಳಿಯಿಲ್ಲದ, ಸಿಹಿ ಮಿಶ್ರಣವಿರುವ ಮಜ್ಜಿಗೆಯನ್ನು ಕುಡಿಯುವುದರಿಂದ ಅಥವಾ ಊಟದ ಜೊತೆಗೆ ಬಳಸುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.
ಮಜ್ಜಿಗೆಯಲ್ಲಿ ಶೇ. 90ರಷ್ಟು ನೀರು ಇರುವುದರಿಂದ ದೇಹದ ದಣಿವನ್ನು ಕಡಿಮೆಗೊಳಿಸುತ್ತದೆ. ಮಜ್ಜಿಗೆಯಲ್ಲಿ ಉಷ್ಣತೆಯನ್ನು ಕಡಿಮೆಗೊಳಿಸುವ ಗುಣವಿದೆ. ಹೀಗಾಗಿ, ಬೇಸಿಗೆ ಸಮಯದಲ್ಲಿ ಮಜ್ಜಿಗೆ ಅತ್ಯುತ್ತಮವಾದ ಪಾನೀಯ. ಅಲ್ಲದೆ, ಮಜ್ಜಿಗೆ ಪಿತ್ತವನ್ನು ಕೂಡ ಕಡಿಮೆಗೊಳಿಸುತ್ತದೆ. ತೀರಾ ಗಟ್ಟಿಯಲ್ಲದ, ನೀರಾಗಿರುವ ಮಜ್ಜಿಗೆಯನ್ನು ಸೇವಿಸುವುದರಿಂದ ದೇಹ ದಿನವಿಡೀ ಹಗುರವಾಗಿರುತ್ತದೆ. ನಾವು ತಿನ್ನುವ ಜಿಡ್ಡಿನಾಂಶವಿರುವ ಆಹಾರದ ಕೊಬ್ಬಿನಾಂಶವನ್ನು ಕೂಡ ಮಜ್ಜಿಗೆ ತೆಗೆದುಹಾಕುತ್ತದೆ. ಮಜ್ಜಿಗೆಯಿಂದ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.
ದೇಹದ ತೂಕ ಕಡಿಮೆ ಮಾಡಬೇಕು ಎನ್ನುವವರು ದಿನದ ಒಂದು ಹೊತ್ತು ಊಟ ಅಥವಾ ಗಟ್ಟಿ ಆಹಾರದ ಬದಲು ಮಜ್ಜಿಗೆಯನ್ನೇ ಕುಡಿಯಿರಿ. ಇದರಲ್ಲಿ ನಮ್ಮ ದೇಹಕ್ಕೆ ಬೇಕಾದ ಎಲ್ಲ ಪೌಷ್ಠಿಕಾಂಶಗಳೂ ಇರುವುದರಿಂದ ಸುಸ್ತು ಎನಿಸುವುದಿಲ್ಲ. ಮಜ್ಜಿಗೆ ನಮ್ಮ ನರಗಳಿಗೆ ಶಕ್ತಿಯನ್ನೂ ನೀಡುತ್ತದೆ. ಹಾಗೇ, ಮಜ್ಜಿಗೆಯಿಂದ ಚರ್ಮದ ಕಾಂತಿಯೂ ಹೆಚ್ಚಾಗುತ್ತದೆ. ಹಾಗೇ, ಕೂದಲು ಉದುರುವಿಕೆ, ಚರ್ಮದ ಕಾಂತಿಹೀನತೆಗೆ ಸಹ ಮಜ್ಜಿಗೆ ರಾಮಬಾಣ. ಮಜ್ಜಿಗೆಯಲ್ಲಿ ವಿಟಮಿನ್ ಎ, ಬಿ, ಡಿ ಮತ್ತು ಇ ಅಂಶಗಳು, ಕ್ಯಾಲ್ಷಿಯಂ, ಪೊಟ್ಯಾಸಿಯಂ, ಪ್ರೋಟೀನ್ ಹೆಚ್ಚಾಗಿರುತ್ತವೆ.