ಕುಮಟಾ: ಕುಮಟಾ ಹಾಗೂ ಹೊನ್ನಾವರ ವ್ಯಾಪ್ತಿಯಲ್ಲಿ ಕಳೆದ 15-20 ವರ್ಷಗಳಿಂದ ಬಿಎಸ್‍ಎನ್‍ಎಲ್‍ನಲ್ಲಿ ದಿನಗೂಲಿ ಕೆಲಸ ಮಾಡುತ್ತಿರುವ ಬಿಎಸ್‍ಎನ್‍ಎಲ್ ಗುತ್ತಿಗೆ ಆಧಾರಿತ ದಿನಗೂಲಿ ನೌಕರರಿಗೆ ಕಳೆದ 8 ತಿಂಗಳಿಂದ ಸಂಬಳ ನೀಡದಿರುವ ಹಿನ್ನೆಲೆಯಲ್ಲಿ ಹೋರಾಟ ನಡೆಸಿರುವ ಬಿಎಸ್‍ಎನ್‍ಎಲ್ ಗುತ್ತಿಗೆ ಆಧಾರಿತ ದಿನಗೂಲಿ ನೌಕರರು ಕುಮಟಾದ ಬಿಎಸ್‍ಎನ್‍ಎಲ್ ಕಾರ್ಯಾಲಯಕ್ಕೆ ಬಂದು ಜನರಲ್ ಮೆನೆಜರ್ ರಾಜಕುಮಾರ್ ಅವರನ್ನು ಭೇಟಿಯಾಗಿ ಸಮಸ್ಯೆ ತಿಳಿಸಿದರು.
ಕಳೆದ ಒಂದು ವರ್ಷದಿಂದ ಸಮಯಕ್ಕೆ ಸರಿಯಾಗಿ ಸಂಬಳ ಸಿಗುತ್ತಿಲ್ಲ. ಕಳೆದ 8 ತಿಂಗಳಿಂದ ಸಂಬಳ ಬಂದೇ ಇಲ್ಲ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮೌಖಿಕವಾಗಿ ಹಾಗೂ ಲಿಖಿತವಾಗಿಯೂ ದೂರು ನೀಡಿದ್ದೇವೆ. ಕಾರವಾರದಲ್ಲಿರುವ ಜನರಲ್ ಮೆನೆಜರ್ ಕಾರ್ಯಾಲಯದ ಎದುರು ಧರಣಿ ಮಾಡಿ ಮನವಿ ಕೊಟ್ಟಿದ್ದೇವೆ. ಆದರೂ ಸಂಬಳ ಪಾವತಿಯಾಗಿಲ್ಲ. ಹೀಗಾಗಿ ನಮ್ಮೆಲ್ಲರ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ ಎಂದು ಈ ವೇಳೆ ನೌಕರರು ತಮ್ಮ ಅಳಲು ತೋಡಿಕೊಂಡರು.
ಈ ಮನವಿಗೂ ಸ್ಪಂದಿಸಲದಿದ್ದರೆ ನಾವು ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆನಡೆಸುವುದಾಗಿ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಕಾರಣಾಂತರದಿಂದ ಸಂಬಳ ಬಟವಡೆಗೆ ವಿಳಂಬವಾಗಿದೆ. ಈ ತಿಂಗಳಾಂತ್ಯದೊಳಗೆ ಸಾಧ್ಯವಾದಷ್ಟು ಸಂಬಳ ಪಾವತಿ ಮಾಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿಎಸ್‍ಎನ್‍ಎಲ್ ಕಾರವಾರ ಡೆಪ್ಯೂಟಿ ಜನರಲ್ ಮೆನೆಜರ್ ನಂದಿ ಹಾಗೂ ಇತರ ಅಧಿಕಾರಿಗಳು ಇದ್ದರು.